ದಾವಣಗೆರೆ, ಜು.21- ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಸೋಡ್ವೇಸ್ ಸಂಸ್ಥೆ (ಶಿರಸಿ) ಇವರ ಸಂಯುಕ್ತಾಶ್ರಯದಲ್ಲಿ ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆ ಗ್ರಾಮದಲ್ಲಿ ಮಾವು ಪುನಶ್ಚೇತನ ಕುರಿತು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮ ನಡೆಯಿತು.
ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಮಾತನಾಡಿ, ಪ್ರಸ್ತುತ ಮಾವು ಬೆಳೆಗಾರರು ಇಳುವರಿ ಕುಸಿತದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಸಂತೇಬೆನ್ನೂರು ಹೋಬಳಿಯಲ್ಲಿ ಸುಮಾರು 1300 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ವಿಸ್ತೀರ್ಣವಿದ್ದು, ಬೆಳೆಗಾರರು ರೋಗ ಮತ್ತು ಕೀಟದ ಹಾವಳಿಯಿಂದ ಬಸವಳಿದಿದ್ದಾರೆ.
ಮಾವು ಕೊಯ್ಲು ಮುಗಿದ ನಂತರ ಮರದ ಶೇಕಡ 25-30 ರಷ್ಟು ಗಿಡದ ಅನುಪಯುಕ್ತ ರೆಂಬೆ ಕೊಂಬೆಗಳನ್ನು, ರೋಗ/ಕೀಟ ಬಾಧಿತ ಕೊಂಬೆಗಳನ್ನು ಸವರಬೇಕು. ನಂತರ ಮರಕ್ಕೆ ಕಾಪರ್ ಅಕ್ಸಿಕ್ಲೋರೈಡ್ನಿಂದ ಅಂಟು ದ್ರಾವಣವನ್ನು ಮಾಡಿ ಹಚ್ಚಬೇಕೆಂದರು. ಈ ರೀತಿ ಪುನಶ್ಚೇತನದಿಂದ ಗಿಡಗಳಿಗೆ ಆಹಾರದ ಕೊರತೆ ನೀಗುವುದಲ್ಲದೇ, ಗಾಳಿ ಬೆಳಕು ಸರಾಗವಾಗಿ ಸಿಕ್ಕು ದ್ಯುತಿಸಂಶ್ಲೇಷಣೆ ಕ್ರಿಯೆ ಹೆಚ್ಚುವುದು. ಇದರಿಂದ ಪ್ರತೀ ವರ್ಷ ಇಳುವರಿಯ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯವಾಗುವುದು ಎಂದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಜಿ. ರೋಹಿತ್ ಮಾತನಾಡಿ, ಇಲಾಖೆಯಿಂದ ಈ ವರ್ಷ ಪರಂಪರಾಗತ್ ಕೃಷಿ ವಿಕಾಸ ಯೋಜನೆಯಡಿ ತಮ್ಮ ಗ್ರಾಮಕ್ಕೆ ಎರೆಹುಳು ಉತ್ಪಾದನಾ ಘಟಕ, ಜೀವಾಮೃತ ಘಟಕ, ಕೊಟ್ಟಿಗೆ ಮನೆ, ಜೇನು ಪೆಟ್ಟಿಗೆ, ಹಸಿರೆಲೆ ಗೊಬ್ಬರ ಘಟಕ ಮುಂತಾದವುಗಳಿಗೆ ಅನುದಾನ ಲಭ್ಯವಿದೆ. ಇದರ ಸದುಪಯೋಗ ಪಡೆಯಬೇಕೆಂದರು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ, ಹೊಸದಾಗಿ 54 ತೋಟಗಾರಿಕೆ ಬೆಳೆಗಳ ತೋಟ ಮಾಡಲು ಅನುದಾನ ಲಭ್ಯವಿದ್ದು ಗ್ರಾಮ ಪಂಚಾಯ್ತಿಯಿಂದ ಕ್ರಿಯಾ ಯೋಜನೆ ಮಂಜೂರು ಮಾಡಿಸಿಕೊಂಡು ಇದರ ಲಾಭ ಪಡೆಯಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ರಮೇಶ್, ಅವಿನಾಶ್, ರೈತರಾದ ತಿಪ್ಪೇಸ್ವಾಮಿ, ಪ್ರಸನ್ನ ಕುಮಾರ್, ಸತೀಶ್, ಹಾಲಸ್ವಾಮಿ ಮತ್ತು ಮೊಹಮದ್ ಇನ್ನಿತರರಿದ್ದರು.