ದಾವಣಗೆರೆ, ಜು.20 – ಅಲೆಗಳು ಎಷ್ಟೇ ಬಂದರೂ ಎದುರಿಸಲು ಜಿಲ್ಲಾಡಳಿತ ಸದಾ ಸಿದ್ದವಾಗಿರುತ್ತದೆ. ಆದರೆ, ಅಲೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಾಗರಿಕರ ಮೇಲಿರುತ್ತದೆ. ಕೊರೊನಾ ಮ್ಯುಟೆಂಟ್ ವೈರಸ್ ಬರುತ್ತಿರುವುದರಿಂದ ಮಕ್ಕಳ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಿನ್ನೆ ಏರ್ಪಡಿಸಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕುಮಾರಪಟ್ಟಣಂನ ಗ್ರಾಸಿಂ ಇಂಡಸ್ಟ್ರೀಸ್ ಇವರಿಂದ ಉಚಿತವಾಗಿ ಜಿಲ್ಲೆಯ ತೀವ್ರ ಅಪೌಷ್ಠಿಕ ಹಾಗೂ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ಸ್ಪಿರುಲಿನಾ ಚಿಕ್ಕಿ ಮತ್ತು ಸ್ಪಿರುಲಿನಾ ಗ್ರಾನ್ಯುಯಲ್ಸ್ ಸ್ವೀಕರಿಸಿ ಅವರು ಮಾತನಾಡಿದರು.
ಈಗಾಗಲೇ ಸರ್ವೇ ಮಾಡಿ 9 ಸಾವಿರ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಜಿಲ್ಲಾಡಳಿತ ಅವರನ್ನು ದತ್ತು ಪಡೆದು 2 ತಿಂಗಳ ಅವಧಿಯಲ್ಲಿ ಗುಣ ಮಾಡುವಂತಹ ಜವಾಬ್ದಾರಿ ವಹಿಸಿಕೊಂಡಿದೆ. ಮೊದಲನೇ ಅಲೆಯಲ್ಲಿ ಚಿಕ್ಕಿ ಮತ್ತು ಗ್ರಾನ್ಯುಯಲ್ಸ್ ತರಿಸಿ ಕೊರೊನಾ ಸೋಂಕಿತರಿಗೆ ಕೊಡಲಾಗುತ್ತಿತ್ತು. ಅವರು ಬೇಗ ಗುಣಮುಖರಾಗಿರುವುದನ್ನು ಕಂಡಿದ್ದು, ಈ ಹಿನ್ನೆಲೆಯಲ್ಲಿ ಅಪೌಷ್ಠಿಕ ಮಕ್ಕಳಿಗೆ ಇದನ್ನು ಕೊಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.
ಜಿ.ಪಂ. ಸಿಇಒ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ತೀವ್ರ ಅಪೌಷ್ಠಿಕ ಮತ್ತು ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ಮೂರನೇ ಅಲೆಯಲ್ಲಿ ಕೊರೊನಾ ಬರುವ ಸಾಧ್ಯತೆ ಇರುತ್ತದೆ ಎಂದು ಪರಿಣಿತರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಪೌಷ್ಠಿಕತೆ ಬಗ್ಗೆ ತಿಳುವಳಿಕೆ ನೀಡುವುದು ಹಾಗೂ ತಾಯಂದಿರು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಕರೆ ನೀಡಿದರು.
ಸಿಂಡಿಕೇಟ್ ಘಟಕದ ಆಯೋಜಕರಾದ ಮಹೇಶ್ ಮಾತನಾಡಿ, ಸ್ಪಿರುಲಿನಾ ಚಿಕ್ಕಿ ಮತ್ತು ಸ್ಪಿರುಲಿನಾ ಗ್ರ್ಯಾನುಯಲ್ಸನ್ನು ಅಪೌಷ್ಟಿಕತೆಯಿಂದ ಬಳಲುತ್ತಿರುವ 5 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಕ್ಕಳು ಈ ಚಿಕ್ಕಿಯನ್ನು ಸೇವಿಸಬಹುದು ಎಂದರು.
ಹಿರಿಯ ನಿವೃತ್ತ ಐಎಎಸ್ ಅಧಿಕಾರಿಗಳಾದ ಕೇದಾರನಾಥ್ ಮಾತನಾಡಿ, ಮಕ್ಕಳಲ್ಲಿ ರೋಗ ನಿರೊಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ ಮಾತ್ರ ಯಾವುದೇ ಕಾಯಿಲೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಸಿಂ ಇಂಡಸ್ಟ್ರಿಸ್ ಸಂಸ್ಥಾಪಕ ಅಜಯ್ ಗುಪ್ತಾ, ಸಂದೀಪ್ ಭಟ್, ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಉಪಸ್ಥಿತರಿದ್ದರು.