ದಾವಿವಿ ಮುಂಭಾಗ ಪ್ರತಿಭಟನೆ
ದಾವಣಗೆರೆ, ಜು.20- ಎರಡು ಉಚಿತ ಲಸಿಕೆ ಪೂರೈಸಿದ ನಂತರವೇ ಆಫ್‌ಲೈನ್ ಪರೀಕ್ಷೆ ಹಾಗೂ ತರಗತಿ ನಡೆಸಬೇಕು ಎಂದು ಆಗ್ರಹಿಸಿ ದಾವಣಗೆರೆ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಇಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈ ಸೇಷನ್ (ಎಐಡಿಎಸ್ ಓ) ನೇತೃತ್ವದಲ್ಲಿ ದಾವಣಗೆರೆ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಿ, ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ, ದಾವಣಗೆರೆ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರ ಅನಿಸಿಕೆಯ ಸಹಿ ಸಂಗ್ರಹ ಅಭಿಯಾನದಲ್ಲಿ ಸುಮಾರು 1 ಲಕ್ಷದ 20 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹವನ್ನೂ ಸಹ ಮನವಿ ಜೊತೆಗೆ ನೀಡಿದರು.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿ ಲಾಕ್ ಡೌನ್ ಆಗಿದ್ದ ಸಮಯದಲ್ಲಿ ಹಿಂದಿನ ಸೆಮಿಸ್ಟರ್ ನ ಪರೀಕ್ಷೆಗಳನ್ನು ನಡೆಸದೆಯೇ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗೆ ಕಳುಹಿಸಲಾಯಿತು. ಕಳೆದ 2 ತಿಂಗಳಿನಿಂದ ಆನ್ ಲೈನ್ ತರಗತಿಗಳು ಸಹ ನಡೆಯುತ್ತಿವೆ. ಈಗ ಹಠಾತ್ತನೆ ಹಿಂದಿನ ಸೆಮಿಸ್ಟರ್‍ನ ಪರೀಕ್ಷೆಯನ್ನು ಜುಲೈ ಕೊನೆಯ ವಾರದಿಂದ ಆಗಸ್ಟ್ ಮೊದಲ ವಾರದಲ್ಲಿ ಮುಗಿಸಿ ನಂತರ ಸೆಪ್ಟಂಬರ್ ಒಳಗೆ ಪ್ರಸ್ತುತ ಸೆಮಿಸ್ಟರ್ ಪರೀಕ್ಷೆಯನ್ನು ಮುಗಿಸಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರವು ಲಕ್ಷಾಂತರ ವಿದ್ಯಾರ್ಥಿಗಳಿಗೆ ದೊಡ್ಡ ಆಘಾತವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸುವ ಬಗ್ಗೆ ಎಐಡಿಎಸ್‍ಓ ರಾಜ್ಯ ಸಮಿತಿ ನಡೆಸಿದ ಬೃಹತ್ ಗೂಗಲ್ ಸಮೀಕ್ಷೆಯಲ್ಲಿ ರಾಜ್ಯದ 46 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
41 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರ್ ನ ಪರೀಕ್ಷೆಗಳನ್ನು ಕೈಬಿಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬೋರ್ಡ್ ಹಾಗೂ ಪಬ್ಲಿಕ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ನಮಗೆ ಪರೀಕ್ಷೆಯನ್ನು ಎದುರಿಸಲು ಭಯವಿಲ್ಲ. ಆದರೆ ಈಗ ಕಳೆದ ಸೆಮಿಸ್ಟರ್ ಪರೀಕ್ಷೆ ನಡೆಸುವುದಾದರೆ ಅದರ ಪಠ್ಯ–ಪ್ರಶ್ನೆ ಪತ್ರಿಕೆ ಸಿದ್ಧತೆ, ಮೌಲ್ಯಮಾಪನ ಈ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಯ ವ್ಯಯವಾಗುತ್ತದೆ. ಆಗಸ್ಟ್- ಸೆಪ್ಟೆಂಬರ್ ತಿಂಗಳಿನಲ್ಲಿ ಕೋವಿಡ್ ಮೂರನೇ ಅಲೆ ಭೀಕರವಾಗಿ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಿರುವಾಗ ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದು ಅವಾಸ್ತವ ಅಷ್ಟೇ ಅಲ್ಲ, ಅದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಅಧಿಕ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತದೆ. ಅತಿ ಕಡಿಮೆ ಸಮಯದಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಿ ನಡೆಸಬೇಕೆಂದರೆ ಇದು ಗುಣಮಟ್ಟದ ಶಿಕ್ಷಣ, ಕಲಿಕೆ, ಜ್ಞಾನಾರ್ಜನೆಗೆ ಮಾರಕವಾಗುತ್ತದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಕೈಬಿಡಿ. ಅಂತಿಮ ಸೆಮಿಸ್ಟರ್‌ನ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಬೇಕು, ಶಿಕ್ಷಣ ತಜ್ಞರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳೊಡನೆ ಪ್ರಜಾತಾಂತ್ರಿಕ ಚರ್ಚೆಗಳನ್ನು ನಡೆಸಿ ಶೈಕ್ಷಣಿಕ ವೇಳಾಪಟ್ಟಿ, ಪರೀಕ್ಷೆ, ಮೌಲ್ಯಮಾಪನ ಇವುಗಳ ಬಗ್ಗೆ ಒಂದು ವೈಜ್ಞಾನಿಕ – ಪ್ರಜಾತಾಂತ್ರಿಕ ನೀತಿಯನ್ನು ರೂಪಿಸಬೇಕು, ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲಸಿಕೆ ನೀಡುವ ಮುನ್ನ ಆಫ್ ಲೈನ್ ತರಗತಿಗಳನ್ನು ಪ್ರಾರಂಭಿಸಬೇಡಿ, ಯುಜಿಸಿ ಹಾಗೂ ಸುಪ್ರೀಂಕೋರ್ಟ್ ಮಾರ್ಗಸೂಚಿ ಅನುಸರಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ಪೂಜಾ, ಕಿರಣ್, ಕಾವ್ಯ, ಸಂಜು, ಪುಷ್ಪ ಸೇರಿದಂತೆ, ಇತರರು ಪಾಲ್ಗೊಂಡಿದ್ದರು.