ದಾರಿ ತೋರಿಸಬೇಕಾದ ಸಂತರೇ ದಾರಿ ತಪ್ಪುತ್ತಿದ್ದಾರೆ

ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಡಾ.ಎಂ.ಜಿ. ಈಶ್ವರಪ್ಪ

ದಾವಣಗೆರೆ, ಮಾ.1- ಕತ್ತಲೆಯ ಜಗತ್ತಿಗೆ ದಾರಿ ತೋರಿಸಬೇಕಾದ ಸಂತರೇ ಇಂದು ದಾರಿ ತಪ್ಪುತ್ತಿದ್ದಾರೆ. ತಾವು ಮಾಡಬೇಕಾದ ಕಾರ್ಯಗಳ ಬದಲಿಗೆ ಮತ್ತೇನನ್ನೋ ಮಾಡುತ್ತಿದ್ದಾರೆ ಎಂದು ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಆರಂಭವಾಗಿರುವ ಹತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ `ಕನ್ನಡ ಕಾವ್ಯ ಮತ್ತು ವಿಶ್ವ ಮಾನವ ಪ್ರಜ್ಞೆ’ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ `ಧರ್ಮ, ರಾಜಕಾರಣ ಮತ್ತು ವಿಶ್ವಪ್ರಜ್ಞೆ’ ವಿಷಯ ಕುರಿತು ಅವರು ಮಾತನಾಡಿದರು.

ಧರ್ಮಕಾರಣದ ವ್ಯಕ್ತಿಗಳು ಮಠಗಳನ್ನೂ, ಮತ್ತು ರಾಜಕಾರಣದ ವ್ಯಕ್ತಿಗಳು ಸಂವಿಧಾನವನ್ನೂ ತ್ಯಜಿಸುವ ಮೂಲಕ ಇಡೀ ಜಗತ್ತಿನಲ್ಲಿ ಯಾರೂ ನೆಮ್ಮದಿಯಿಂದ ಬದುಕದಂತವ ವಾತಾವರಣ ಸೃಷ್ಟಿಸಿದ್ದಾರೆ. ಕಾರಣ ಇವರಿಗೆ  ದೃಷ್ಟಿಕೋನದ ಕಾರ್ಯಾಗಾರ ಮಾಡುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಆಚಾರಕ್ಕೆ ಅರಸನಾಗು, ಜಗತ್ತಿಗೆ ಜ್ಯೋತಿಯಾಗು ಎಂದು ಹೇಳಿದ ದೇಶ ನಮ್ಮದು. ಆದರೆ ಇಂದು ನಾವು, ನಮ್ಮ ಪರಂಪರೆಯೇ ಶ್ರೇಷ್ಠ ಎಂಬ ಒಣ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೇವೆ. ಈ  ಬಗ್ಗೆ ಚಿಂತನೆ ಅಗತ್ಯವಿದೆ ಎಂದರು.

ನಾವು ನಮ್ಮದೇ ಶ್ರೇಷ್ಠವೆಂಬ ಭ್ರಮೆಯಲ್ಲಿದ್ದೇವೆ. ನಮ್ಮಲ್ಲಿರುವ ಅಸಹನೆ, ಅಸಮಾನತೆಯೇ ಈ ದುಸ್ಥಿತಿಗೆ ಕಾರಣವಾಗಿದೆ. ಇತರರನ್ನು ದ್ವೇಷಿಸಿದರೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಎಲ್ಲರೂ ನಮ್ಮವರು ಎಂಬ ವಿಶ್ವಪ್ರಜ್ಞೆ ಹೊಂದಿದರೆ ಎಲ್ಲರೂ ಚೆನ್ನಾಗಿ ಬದುಕಲು ಸಾಧ್ಯವಾಗಲಿದೆ ಎಂದರು.

`ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮನುಷ್ಯನ ಪರಿಕಲ್ಪನೆ’ ಕುರಿತು ಮಾತನಾಡಿದ ಡಾ.ದಾದಾಪೀರ್ ನವಿಲೇಹಾಳ್, ಮೌಲ್ಯಯುತ ಕನ್ನಡ ಸಾಹಿತ್ಯವನ್ನು ಅಂಕ ಗಳಿಕೆಗಾಗಿ ಓದದೆ, ಸಾಮಾಜೀಕರಿಸಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಪಂಪನ ಆದಿಪುರಾಣ ಮೌಲ್ಯಗಳ ದೊಡ್ಡ ಆಗರವಾಗಿದೆ. ಬುದ್ಧ ಮತ್ತು ಬಾಹುಬಲಿ ಗೆದ್ದೂ ಮೌಲ್ಯಗಳಿಗಾಗಿ ಸಂಕಟಪಟ್ಟಿದ್ದನ್ನು ಆದಿಪುರಾಣ ಸೊಗಸಾಗಿ ವಿವರಿಸಿದೆ. ಇತರರು ಖಳ ನಾಯಕನಂತೆ ಬಿಂಬಿಸಿರುವ ದುರ್ಯೋಧನನ ಹೃದಯ ವೈಶಾಲ್ಯತೆ ಯನ್ನು ರನ್ನ ಪರಿಚಯಿಸಿದ್ದಾನೆ. ಈ ಎಲ್ಲಾ ಪಾತ್ರಗಳಲ್ಲೂ ಮೌಲ್ಯಗಳಿವೆ ಎಂದರು.

ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಅವರು, `ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಮನುಷ್ಯನ ಪರಿಕಲ್ಪನೆ ‘ ಕುರಿತು ಮಾತನಾಡುತ್ತಾ, ನಾವು ನಮ್ಮಲ್ಲಿನ ಜಾತೀಯತೆ ನಿರ್ಮೂಲನೆ  ಗೊಳಿಸದಿದ್ದರೆ ಸುಖೀ ಸಮಾಜ ನಿರ್ಮಾಣ  ಅಸಾಧ್ಯ ಎಂದರು.

ಧರ್ಮ, ರಾಜ ಪ್ರಭುತ್ವ, ಭಾರತೀಯ ನ್ಯಾಯ ಮೀಮಾಂಸೆ ಶ್ರೇಣೀಕೃತ ವ್ಯವಸ್ಥೆಯನ್ನು ಜೀವಂತವಾಗಿಡಲು ಮಾನವೀಯ ಪದಗಳನ್ನು ಬಳಕೆ ಮಾಡಿಕೊಂಡು ಬಂದಿವೆ. ಆದರೆ, ವಚನಕಾರರು ಈ ಶ್ರೇಣಿಕೃತ ವ್ಯವಸ್ಥೆಯನ್ನು ಧಿಕ್ಕರಿಸಿದ್ದರು ಎಂದರು.

`ಆಧುನಿಕ ಕಾವ್ಯದಲ್ಲಿ ಮನುಷ್ಯ ಸಂಬಂಧ’ ಕುರಿತು ಮಾತನಾಡಿದ ಪ್ರೊ.ಸಿ.ವಿ.ಪಾಟೀಲ್, ಜಗತ್ತಿನಲ್ಲಿ 700 ಕೋಟಿ ಜನರಿದ್ದರೂ ಮಾನವ ಸಂಬಂಧಕ್ಕಾಗಿ ಹುಡುಕಾಟ ನಡೆಸುವ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ. ನಮ್ಮ ಮಧ್ಯೆ ಕಟ್ಟಿಕೊಂಡಿರುವ ಜಾತಿ ಗೋಡೆ ಕೆಡವಿದಾಗ ಮನುಷ್ಯ ಸಂಬಂಧ ಉಳಿಯಲಿದೆ ಎಂದು ಹೇಳಿದರು. ಸಮ್ಮೇಳನದ ಸರ್ವಾಧ್ಯಕ್ಷ ಎನ್.ಟಿ.ಎರಿಸ್ವಾಮಿ ಉಪಸ್ಥಿತರಿದ್ದರು.

error: Content is protected !!