ಗ್ರಾಮದ ಅಭಿವೃದ್ದಿಗೆ ಸದಸ್ಯರು ಪ್ರಾಮಾಣಿಕ ಸೇವೆ ಸಲ್ಲಿಸಬೇಕು

ಜಗಳೂರು, ಮಾ.1- ಗ್ರಾಮದ ಅಭಿವೃದ್ಧಿಗೆ ಪಂಚಾಯಿತಿ ಸದಸ್ಯರು ಆತ್ಮ ತೃಪ್ತಿಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಸಲಹೆ ನೀಡಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಜಗ ಳೂರು ಮತ್ತು-ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಸಭಾ ಕ್ಷೇತ್ರದ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ  ಸದಸ್ಯರು ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ  ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಕನಸಾದ  ಅಧಿಕಾರ ವಿಕೇಂದ್ರೀಕರಣದ ಸಲುವಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಆರಂಭವಾಗಿದ್ದು, ಗ್ರಾಮಗಳಲ್ಲಿನ ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ, ಅಂಗನವಾಡಿ ಶಾಲೆ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ನರೇಗಾ ಯೋಜನೆಯ ವಿವಿಧ ಇಲಾಖೆಗಳಡಿ ಕಾಮಗಾರಿ ಸಮರ್ಪಕ ಜಾರಿಗೊಳಿಸುವಂತೆ   ಅಧಿಕಾರಿಗಳಿಗೆ ತಾಕೀತು ಮಾಡಿ  ಮತ ನೀಡಿದ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಕೆಲಸಕ್ಕೆ ಮುಂದಾಗಬೇಕು ಎಂದರು.

ಬಿಜೆಪಿ ಸರ್ಕಾರದ ಆಡಳಿತ ಮೂರು ವರ್ಷ ಕಳೆದರೂ ಕಾಂಗ್ರೆಸ್ ಆಡಳಿತಾವಧಿ ಯಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದು,  ರಿಪೇರಿಯಾಗಿಲ್ಲ. ಅಲ್ಲದೆ  ವಸತಿ ಯೋಜನೆಯಡಿ ಮನೆಗಳ ಬಿಲ್ ಪಾವತಿಸಿಲ್ಲ. ಹೊಸದಾಗಿ ಮನೆ ಮಂಜೂರಾಗಿಲ್ಲ. ಪ್ರಧಾನಿ ಮೋದಿ ಅವರ ಮೇಲಿನ ನಿರೀಕ್ಷೆ ಹುಸಿಯಾಗಿದೆ ಎಂದರು.

ದೇಶದಲ್ಲಿ ರೈತರ ಹೋರಾಟ ಮುಗಿಲು ಮುಟ್ಟಿದರೂ ಕೇಂದ್ರ ಸರ್ಕಾರದಿಂದ ಸ್ಪಂದನೆಯಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕ್ಷೇತ್ರದಲ್ಲಿ  29 ಗ್ರಾ.ಪಂ. ವ್ಯಾಪ್ತಿಯಲ್ಲಿ  ಕಾಂಗ್ರೆಸ್ ಪಕ್ಷದಿಂದ ಹೆಚ್ಚಿನ ಸಂಖ್ಯೆಯ ಸದಸ್ಯರು ಆಯ್ಕೆಯಾಗಿರುವುದು ಶ್ಲಾಘನೀಯ ಎಂದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ದೇಶದಲ್ಲಿ ರೈತರಿಗೆ ಕೂಲಿ ಕಾರ್ಮಿಕರಿಗೆ ,ಎಲ್ಲಾ ವರ್ಗದ ಜನತೆಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ, ನೆಮ್ಮದಿಯ ಬದುಕು ಸಿಗುವುದು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಪಿಸಿಸಿ ಜಗಳೂರು ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ ಡಾ.ಬಿ. ಆರ್ ಅಂಬೇಡ್ಕರ್ ಅವರ ಸಂವಿಧಾನಬದ್ಧ ಮೀಸಲಾತಿ ಹಕ್ಕುಗಳಿಂದ ಎಲ್ಲಾ ವರ್ಗದ ಸಮುದಾಯಗಳಿಗೆ ಹಾಗೂ ಮಹಿಳೆಯರಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಸ್ಥಾನಮಾನ ದೊರಕಿದೆ. ಪಂಚಾಯತ್ ರಾಜ್ ಕಾಯ್ದೆಯನ್ವಯ ತೆರಿಗೆ, ವಿಶೇಷ ಅನುದಾನಗಳು ಸೇರಿದಂತೆ ಆರ್ಥಿಕ ಸಂಪನ್ಮೂಲಗಳ ಬಳಕೆಗೆ ಅವಕಾಶವಿದ್ದು ಗ್ರಾ.ಪಂ. ಸಬಲೀಕರಣಕ್ಕೆ ಒತ್ತು ನೀಡಬೇಕು  ಎಂದು ಹೇಳಿದರು.

ಇದೇ ವೇಳೆ 29 ಗ್ರಾ.ಪಂ.ಗಳ  ವ್ಯಾಪ್ತಿಯ ಕಾಂಗ್ರೆಸ್  ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್  ಅಹಮ್ಮದ್ ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮುಖಂಡರಾದ ತಿಪ್ಪೇಸ್ವಾಮಿ ಗೌಡ, ಯು.ಜಿ. ಶಿವಕುಮಾರ್, ಪಲ್ಲಾಗಟ್ಟೆ ಶೇಖರಪ್ಪ, ರಾಮರೆಡ್ಡಿ, ರವಿಚಂದ್ರ, ಶಿವಕುಮಾರ್, ಶಂಭುಲಿಂಗಪ್ಪ, ಗಿರೀಶ್ ಒಡೆಯರ್, ಜಯ್ಯಪ್ಪ, ಸಲಾಂ, ಬಿ. ಲೋಕೇಶ್, ವೆಂಕಟೇಶ್ , ಮಹಮ್ಮದ್ ಅಲಿ, ರಮೇಶ್,  ಮಹಿಳಾ ಕಾಂಗ್ರೆಸ್‌ನ ನಾಗರತ್ನಮ್ಮ, ಕೆಂಚಮ್ಮ , ಸಾವಿತ್ರಮ್ಮ ಇನ್ನಿತರೆ ಸದಸ್ಯರುಗಳು ಭಾಗವಹಿಸಿದ್ದರು.

error: Content is protected !!