ಎಲ್ಲರ ಅಭಿಪ್ರಾಯದಂತೆ ಬಜೆಟ್ ತಯಾರಿ

ಮಲೇಬೆನ್ನೂರಿನಲ್ಲಿ ಪುರಸಭೆಯ ಮುಖ್ಯಾಧಿಕಾರಿ ಉದಯಕುಮಾರ್

ಮಲೇಬೆನ್ನೂರು, ಫೆ.27- ಇಲ್ಲಿನ ಪುರಸಭೆಯ ಕೌನ್ಸಿಲ್‌ ಸಭಾಂಗಣದಲ್ಲಿ 2021-22ನೇ ಸಾಲಿನ ಆಯವ್ಯಯ ಸಂಬಂಧ 2ನೇ ಹಂತದ ಪೂರ್ವಭಾವಿ ಸಾರ್ವಜನಿಕ ಸಭೆಯನ್ನು ಪುರಸಭೆ ಅಧ್ಯಕ್ಷೆ ನಾಹೀದ ಅಂಜುಂ ಸೈಯದ್ ಇಸ್ರಾರ್ ಅಧ್ಯಕ್ಷತೆಯಲ್ಲಿ ಜರುಗಿತು.

ಪುರಸಭೆ ಸದಸ್ಯ ಬಿ. ಸುರೇಶ್ ಮಾತನಾಡಿ, ಆಶ್ರಯ ಕಾಲೋನಿಯಲ್ಲಿರುವ ಮೀಸಲು ಜಾಗವನ್ನು ಹದ್ದುಬಸ್ತು ಮಾಡುವಂತೆ ಕೋರಿದರು. ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿಯೇ ಶವಾಗಾರ ಕೊಠಡಿ ನಿರ್ಮಾಣಕ್ಕೆ ಅನುದಾನ ಮೀಸಲಿಡುವಂತೆ ಹೇಳಿದಾಗ, ಸದಸ್ಯ ಯೂಸುಫ್ ಮಧ್ಯ ಪ್ರವೇಶಿಸಿ, ಆರೋಗ್ಯ ಇಲಾಖೆಯ ಅನುದಾನದಲ್ಲೇ ಶವಾಗಾರ ಕೊಠಡಿ ನಿರ್ಮಿಸಲಿ ಎಂದರು.

ಅಂಗವಿಕಲರ ಸಂಘಕ್ಕೆ ನಿವೇಶನ ನೀಡಿ ಎಂದು ಸಂಘದ ಪೂಜಾರ್ ಗಂಗಾಧರ್ ಮನವಿ ಮಾಡಿದರು. ಅಲ್ಲದೆ, 46 ಪೌರ ಕಾರ್ಮಿಕರ ಅವಶ್ಯಕತೆ ಇದ್ದು, ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ನೇಮಕ ಮಾಡಿಕೊಳ್ಳುವಂತೆ ಅನೇಕರು ಆಗ್ರಹಿಸಿದರು.

ಮುಖ್ಯಾಧಿಕಾರಿ ಉದಯಕುಮಾರ್ ಬಿ. ತಳವಾರ್ ಮಾತನಾಡಿ, ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ನೀಡಿದ ಸಲಹೆ, ಅಭಿಪ್ರಾಯಗಳನ್ನು ಆಧರಿಸಿ ಅಂದಾಜು ಪಟ್ಟಿ ತಯಾರಿಸಿ ಬಜೆಟ್ ಮಂಡಿಸಲು ಪ್ರಯತ್ನಿಸೋಣ ಎಂದರು. ಹೆದ್ದಾರಿಗೆ ಪಟ್ಟಣದ ಹೊರಗೆ ಸ್ವಾಗತ ಹಾಗೂ ವಂದನಾ ಫಲಕಗಳನ್ನು ಹಾಕಿಸುವ ಬಗ್ಗೆ ಪಿಡಬ್ಲ್ಯೂಡಿ ಇಂಜಿನಿಯರ್ ಜೊತೆ ಚರ್ಚಿಸಿ, ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇತರೆ ಪ್ರಸ್ತಾವಿತ ವಿಷಯಗಳ ಕುರಿತು ಸಂಬಂಧಿಸಿದವರ ಬಳಿ ಚರ್ಚಿಸಿ ಅನುದಾನ ನೀಡುವಂತೆ ಪತ್ರ ಬರೆಯುತ್ತೇನೆ ಎಂದರು.

ಮಾರ್ಚ್ 2 ರಂದು ಬಜೆಟ್ ಸಭೆ, ಮಾರ್ಚ್ 3 ಕ್ಕೆ ಸಂತೆ ಹರಾಜು ಮತ್ತು ಮಾರ್ಚ್ 4 ಕ್ಕೆ ಸಾಮಾನ್ಯ ಸಭೆ ನಡೆಸಲಾಗುವುದೆಂದರು. ಇದೇ ವೇಳೆ ಪುರಸಭೆಗೆ ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿರುವ ಪಿ.ಆರ್. ರಾಜು, ಜಿ.ಹೆಚ್. ಮಂಜಪ್ಪ, ಜಿ. ವಾಸಪ್ಪ, ಸುಮಾ, ಎ.ಕೆ. ಲೋಕೇಶ್ ಅವರನ್ನು ಸ್ವಾಗತಿಸಲಾಯಿತು.  

ಪುರಸಭೆ ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಸದಸ್ಯರಾದ ಎ. ಆರೀಫ್ ಅಲಿ, ಮಾಸಣಗಿ ಶೇಖರಪ್ಪ, ದಾದಾವಲಿ, ಆಶ್ರಯ ಸಮಿತಿ ಸದಸ್ಯ ಬಿ.ಎನ್. ಚಂದ್ರಪ್ಪ, ಭೋವಿ ಶಿವು, ಪಾನಿಪೂರಿ ರಂಗನಾಥ್, ಪುರಸಭೆ ಅಧಿಕಾರಿಗಳಾದ ದಿನಕರ್, ಉಮೇಶ್, ನವೀನ್, ಪ್ರಭು, ಇಮ್ರಾನ್ ಇನ್ನಿತರರು ಹಾಜರಿದ್ದರು.

error: Content is protected !!