ಬೇಯಿಸದಿದ್ದರೂ ಬಾಯಿಗೆ ರುಚಿ…ದೇಹಕ್ಕೆ ಹಿತ ನಮ್ಮೀ ಅಡುಗೆ

ದಾವಣಗೆರೆ, ಫೆ.27- ಅಡುಗೆ ಮಾಡಲು ಮುಖ್ಯವಾಗಿ ಬೇಕಾಗಿರುವುದು ಸ್ಟೌವ್. ರೋಟರಿ ಬಾಲಭವನದಲ್ಲಿ ಸೇರಿದ್ದ ಮಹಿಳಾ ಬಳಗ ಇಂದು ಒಲೆ ಹಚ್ಚದೆ, ರುಚಿ-ಶುಚಿಯಾದ ಹಾಗೂ ಪೌಷ್ಠಿಕಾಂಶವುಳ್ಳ ಆಹಾರವನ್ನು ತಯಾರಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಲೇಡಿಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಇಂದು §ಕುಕಿಂಗ್ ವಿತೌಟ್ ಫೈರ್¬ ಸ್ಪರ್ಧೆಯ ನ್ನು ಹಮ್ಮಿಕೊಂಡಿದ್ದು, ಸುಮಾರು 20 ಸ್ಪರ್ಧಿಗಳು ಭಾಗವಹಿಸಿದ್ದರು.

 ಈ ಸ್ಪರ್ಧೆಯಲ್ಲಿ ಹೆಚ್ಚಾಗಿ ದಾವಣಗೆರೆ ಜನರ ಪ್ರೀತಿಯ ಮಂಡಕ್ಕಿ, ವಿವಿಧ ರೀತಿಯ ಅವಲಕ್ಕಿ, ಕೋಸಂಬರಿಗಳು ಸ್ಥಾನ ಪಡೆದಿದ್ದರೆ, ಇದಕ್ಕೂ ಭಿನ್ನವಾಗಿ ತಯಾರಿಸಬಹುದಾದ ಆಹಾರ ಪದಾರ್ಥಗಳನ್ನು ಸ್ಪರ್ಧಿಗಳು ತಯಾರಿಸಿ  ಅದನ್ನು ಅಲಂಕರಿಸಿ ಪ್ರದರ್ಶಿಸುವ ಮೂಲಕ ತಮ್ಮಲ್ಲಿರುವ  ಸೃಜನಶೀಲತೆಯನ್ನು ಮೆರೆದರು.

ಹೊಸತೆನಿಸಿದ್ದು ಪಂಚಕದಿ: ಭಾರತಿ ಸಂತೋಷ್ ತಯಾರಿಸಿದ್ದ ಕೊಬ್ಬರಿ, ಬೆಲ್ಲ, ಏಲಕ್ಕಿ, ದ್ರಾಕ್ಷಿ, ಬಾದಾಮಿ ಸೇರಿಸಿ ಮಾಡಿದ ಪಂಚಕದಿ ಸಿಹಿ ಖಾದ್ಯ ಮಕ್ಕಳು, ಹಿರಿಯರಾದಿಯಾಗಿ ಇಷ್ಟಪಡುವ ಹಾಗೂ ಪೌಷ್ಠಿಕಾಂಶಯುಕ್ತ ತಿನಿಸಾಗಿತ್ತು. ಸುಪರ್ಣಾ ಶೇಖರ್ ಅವರ ದಿಢೀರ್ ಬೀಟ್‌ರೂಟ್ ಹಲ್ವಾ ಬಾಳೇಹಣ್ಣು, ಕೊಬ್ಬರಿ, ಜೇನುತುಪ್ಪ, ಏಲಕ್ಕಿಯೊಂದಿಗೆ ಬೆರೆತು ಹದವಾಗಿತ್ತಲ್ಲದೆ, ಅದನ್ನು ಅಲಂಕರಿಸಿದ್ದ ರೀತಿ ಆಕರ್ಷಕವಾಗಿತ್ತು.

 ಸ್ಪರ್ಧಿ ತೇಜಸ್ವಿನಿ ಅವರು ಸಿದ್ಧಗೊಳಿಸಿದ್ದ §ಬ್ರೆಡ್ ಸ್ಯಾಂಡ್‌ವಿಚ್ ವಿತ್ ಪ್ರೊಟೀನ್ ಸಲಾಡ್¬ ವಿವಿಧ ತರಕಾರಿಗಳು, ಮೊಳಕೆ ಕಾಳುಗಳು, ಸಾಸ್, ಗ್ರೀನ್ ಚಟ್ನಿಯೊಂದಿಗೆ ಸಂಪದ್ಭರಿತವಾಗಿ ಕಾಣುತ್ತಿತ್ತಲ್ಲದೆ, ಇಂದಿನ ಮಕ್ಕಳಿಗೆ ಇಷ್ಟವಾದ ಆಹಾರವಾಗಿತ್ತು. ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಬಾಳೇಹಣ್ಣು, ಮೂಲಂಗಿ ಬಳಸಿ ಮಾಡಿದ್ದ ಹೂವು, ಮೀನು ಇತ್ಯಾದಿ ಕಲಾತ್ಮಕ ವಿನ್ಯಾಸಗಳು ತೇಜಸ್ವಿನಿ ಅವರ ಕಲಾ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. 

ನಾನು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ 73ರ ಹರೆಯದ ದೊಡ್ಡಮ್ಮನವರು ಸಿಹಿ ಅವಲಕ್ಕಿ ಮಾಡಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೆ.ಎನ್. ಗೀತಾ, ದಾಕ್ಷಾಯಣಿ, ಶೋಭಾರವರು ಮೊಳಕೆ ಕಾಳು ಸಲಾಡ್‌ಗಳು ಹಾಗೂ  ಕಾಂಗ್ರೆಸ್ ಖಾರ ತಯಾರಿಸಿದ್ದರು. ಶಂಕ್ರಮ್ಮನವರು ಜೋಳದ ಅರಳಿಟ್ಟಿನ ಉಂಡೆ ಪ್ರದರ್ಶಿಸಿದ್ದರು.

ಲಕ್ಷ್ಮೀಯವರ ಮಂಡಕ್ಕಿ, ಕೋಸಂಬರಿ, ಮಂಗಳ ಅವರ ಕೆಂಪು ಹಾಗೂ ಹಸಿರು ಖಾರದ ಅವಲಕ್ಕಿ,  ಅಂಬಿಕಾ ಚಂದ್ರಶೇಖರ್ ತಯಾರಿಸಿದ್ದ  ಹೆಸರುಕಾಳು ಮೊಳಕೆ ಕೋಸಂಬರಿ, ಸ್ವೀಟ್ ಕಾರ್ನ್, ನರ್ಗೀಸ್ ಮಂಡಕ್ಕಿ, ಶಾರದಾರವರು ಸಿದ್ಧಪಡಿಸಿದ್ದ ಸಿಹಿ ಅವಲಕ್ಕಿ, ಖಾರದ ಅವಲಕ್ಕಿ, ಮೊಸರು ಅವಲಕ್ಕಿ ಗಮನ ಸೆಳೆದವು. ಸಿಹಿ ಅವಲಕ್ಕಿಗೆ ಕಾಯಿಹಾಲು, ಬಾಳೆಹಣ್ಣು, ಬೆಲ್ಲ, ಸೇಬು, ದಾಳಿಂಬೆ ಸೇರಿಸಿ ಹೊಸ ರೀತಿಯ ಖಾದ್ಯಕ್ಕೆ ನಾಂದಿ ಹಾಡಿದ್ದರು.

ಬೇಯಿಸದಿದ್ದರೂ ಬಾಯಿಗೆ ರುಚಿ...ದೇಹಕ್ಕೆ ಹಿತ ನಮ್ಮೀ ಅಡುಗೆ - Janathavani

ಕಡಿಮೆ ಸಮಯದಲ್ಲಿ ಆರೋಗ್ಯಭರಿತ ಆಹಾರ

‘ಕುಕಿಂಗ್ ವಿತೌಟ್ ಫೈಯರ್’ ಉದ್ಘಾಟಿಸಿದ ರವಿಂದ್ರನಾಥ್

ದಾವಣಗೆರೆ, ಫೆ.27-  ಹಿಂದೆಲ್ಲಾ ನಮ್ಮ ಹಿರಿಯರು ತಯಾರಿಸುತ್ತಿದ್ದ ರುಚಿಕಟ್ಟಾದ ತಂಬುಳಿ, ಕಷಾಯ, ಉಂಡೆಗಳು, ವಿವಿಧ ಬಗೆಯ ಮೊಳಕೆ ಕಾಳುಗಳ ಕೋಸಂಬರಿಗಳು, ಹಚ್ಚಿದ ಮಂಡಕ್ಕಿ, ಅವಲಕ್ಕಿಗಳು ಸೇರಿದಂತೆ ಪೌಷ್ಟಿಕಾಂಶಯುಕ್ತವಾದ ಮನೆಯಡುಗೆಗಳು ಮನೆಯ ಮಕ್ಕಳು, ಹಿರಿಯರಿಗೆ ಆರೋಗ್ಯಭರಿತ ಆಹಾರವಾಗಿತ್ತು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.

ಕುಕಿಂಗ್ ವಿತೌಟ್ ಫೈಯರ್¬ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸ್ಪರ್ಧೆಗಳು ಮಹಿಳೆಯರಲ್ಲಿ ಅಡಗಿರುವ ಕೌಶಲ್ಯಗಳನ್ನು ಹೊರತರುವುದಲ್ಲದೆ, ಮನೆಯಲ್ಲಿಯೇ ಅಲ್ಪ ಸಮಯದಲ್ಲಿ , ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಆರೋಗ್ಯಭರಿತ ಆಹಾರಗಳ ಪರಿಚಯ ಮಾಡಿಕೊಡುತ್ತದೆ. ಗ್ಯಾಸ್ ಸೇರಿದಂತೆ ಎಲ್ಲವೂ ದುಬಾರಿ ಆಗುತ್ತಿರುವ ಈ ಕಾಲಕ್ಕೆ ಇದೊಂದು ಉತ್ತಮ ಚಿಂತನೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಶಾಂತಾಭಟ್ ಮಾತನಾಡಿ ಅಡುಗೆಯೂ ಒಂದು ಸೃಜನಾತ್ಮಕ ಕಲೆ. ಪ್ರತಿ ದಿನವೂ ಹೊಸರುಚಿಯೇ ಆಗಿರುತ್ತದೆ. ಒಲೆ ಹಚ್ಚದೆ, ಬೇಯಿಸದೆ, ಒಗ್ಗರಣೆ ಹಾಕದೆ ಇದ್ದರೂ, ರುಚಿಯಾದ ಹಾಗೂ ಪೌಷ್ಠಿಕಾಂಶವುಳ್ಳ ಆಹಾರವನ್ನು ಕಡಿಮೆ ಸಮಯದಲ್ಲಿ ಮಾಡಬಹುದು ಎಂದರಲ್ಲದೆ, ಅಕ್ಕರಾಸ್ಥೆಯಿಂದ ಮಾಡಿದ ಅಡುಗೆ ರುಚಿಯಾಗಿರುತ್ತದೆ ಎಂದು ಮಹಿಳಾಮಣಿಗಳಿಗೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಜಿ. ಬಸವರಾಜ್, ಕಾರ್ಯದರ್ಶಿ ಪ್ರಶಾಂತ್ ಅಂಬರ್‌ಕರ್, ಲೇಡಿಸ್ ಕ್ಲಬ್ ಸಂಸ್ಥಾಪಕಿ ಅಮೀರಾ ಬಾನು, ಅಧ್ಯಕ್ಷೆ ದಾಕ್ಷಾಯಣಿ, ತೀರ್ಪುಗಾರರಾದ ಸ್ತ್ರೀರೋಗ ತಜ್ಞೆ ಡಾ. ರಜನಿ,  ಶಾರದಮ್ಮ ಮಹಾದೇವಪ್ಪ ಉಪಸ್ಥಿತರಿದ್ದರು.

ಮಂಗಳಾಭಟ್ ಪ್ರಾರ್ಥಿಸಿದರು. ಲಕ್ಷ್ಮೀ ಸ್ವಾಗತಿಸಿದರು. ಪದ್ಮಪ್ರಿಯ ಹಾಗೂ ತೇಜಸ್ವಿನಿ ನಿರೂಪಿಸಿ  ವಂದಿಸಿದರು.

ವಿಜೇತರು: ಪ್ರಥಮ ಬಹುಮಾನವನ್ನು ತೇಜಸ್ವಿನಿ, ದ್ವಿತೀಯ ಬಹುಮಾನವನ್ನು ಸುಪರ್ಣ, ತೃತೀಯ ಬಹುಮಾನ ಶಂಕ್ರಮ್ಮ ಹಾಗೂ ಸಮಾಧಾ ನಕರ ಬಹುಮಾನವನ್ನು ದೊಡ್ಡಮ್ಮ ಪಡೆದರು.

error: Content is protected !!