ಎಐಡಿಎಸ್ ಓ ನೇತೃತ್ವದಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳ ಪ್ರತಿಭಟನೆ
ದಾವಣಗೆರೆ, ಜು.19- ಯುಜಿಸಿ ನೀಡಿರುವ ನೂತನ ಪರೀಕ್ಷಾ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ, ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗಳು ಅನುಸರಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್, ರಾಜ್ಯ ಮಟ್ಟದ ಡಿಪ್ಲೋಮಾ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನಗರದಲ್ಲಿ ಇಂದು ಡಿಪ್ಲೋಮಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಜಮಾಯಿಸಿದ್ದ ಬಾಪೂಜಿ, ಡಿಆರ್ ಆರ್, ಎಸ್‍ಜೆವಿಪಿ, ಜಿಪಿಟಿ, ಜೈನ್, ಜಿಎಂಐಟಿ ಕಾಲೇಜುಗಳ ಡಿಪ್ಲೋಮಾ ವಿದ್ಯಾರ್ಥಿಗಳು, ಕೆಲ ಕಾಲ ಪ್ರತಿಭಟಿಸಿ, ನಂತರ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರ ಮಲ್ಲಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದಾಗಬೇಕು, ಎರಡು ಡೋಸ್ ಉಚಿತ ಲಸಿಕೆ ಆಗುವವರೆಗೂ ಆಫ್ ಲೈನ್ ತರಗತಿ/ಪರೀಕ್ಷೆ ನಡೆಯಬಾರದು ಎಂಬ ಜನಾಭಿಪ್ರಾಯ ಹೊರಹೊಮ್ಮಿದೆ. ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ಮಾತ್ರ ಕಡ್ಡಾಯವಾಗಿ ನಡೆಸಬೇಕು. ಮಧ್ಯಂತರ / ವಾರ್ಷಿಕ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದು ಮಾಡಿ ಮತ್ತು ಅವರನ್ನು ಆಂತರಿಕ ಮೌಲ್ಯಮಾಪನ ಅಥವಾ ಹಿಂದಿನ ಸೆಮಿಸ್ಟರ್‌ನ ಆಧಾರದ ಮೇಲೆ ಮೌಲ್ಯಮಾಪನ ಮಾಡ ಬೇಕು ಎಂಬ ಯುಜಿಸಿಯ ಈ ವೈಜ್ಞಾನಿಕ ಮಾರ್ಗಸೂಚಿ ಯನ್ನು ಅನುಸರಿಸಬೇಕು. ಅದರ ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಪ್ರತಿಭಟನಾ ವಿದ್ಯಾರ್ಥಿಗಳು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಯುಜಿಸಿಯು ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆ ಮಾತ್ರ ನಡೆಸಬೇಕು ಎಂದು ಹೇಳಿದೆ. ಹೀಗಿರುವಾಗ, ಇದರ ಹೊರತಾಗಿ ಬೇರೆ ಪರೀಕ್ಷೆಗಳನ್ನು ನಡೆಸುವುದು ಅವೈಜ್ಞಾನಿಕ ಮಾತ್ರವಲ್ಲ ಕಾನೂನುಬಾಹಿರ ಕೂಡ ಆಗುತ್ತದೆ. ರಾಜ್ಯ ಸರ್ಕಾರ ಈ ಕೂಡಲೇ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿ – ಶಿಕ್ಷಣದ ಪರವಾದ ನಿರ್ಧಾರವನ್ನು ಅಖಿಲ ಭಾರತ ಮಟ್ಟದಲ್ಲಿ ಎಐಸಿಟಿಇ ಮತ್ತು ರಾಜ್ಯ ಮಟ್ಟಕ್ಕೆ ಡಿಟಿಇ ಅನುಸರಿಸಬೇಕು ಎಂದು ಡಿಪ್ಲೋಮಾ ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಉಪಾಧ್ಯಕ್ಷ ಕಿರಣ, ಜಂಟಿ ಕಾರ್ಯದರ್ಶಿ, ಸಂಘಟನಾಕಾರ್ತಿ ಪುಷ್ಪ, ಸ್ವಪ್ನ ಹಾಗೂ ವಿದ್ಯಾರ್ಥಿಗಳಾದ ಅಭಿಲಾಷ್, ಸೂರಜ್, ತೇಜಸ್, ಗಿರೀಶ್, ಫೈಜಾನ್, ಸಂಜಯ್, ಗಗನ ಮುಂತಾದ ವಿದಾರ್ಥಿಗಳು ಭಾಗವಹಿಸಿದ್ದರು.