ದಾವಣಗೆರೆ, ಫೆ.27- ದುಷ್ಟರ ಶಿಕ್ಷಕ, ಶಿಷ್ಟ ಪರಿಪಾಲಕ ಶ್ರೀ ವೀರ ಭದ್ರೇಶ್ವರನ ಆದರ್ಶಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣದತ್ತ ಸಾಗಬೇಕೆಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಅವರಿಂದು ಹುಬ್ಬಳ್ಳಿ ಚೌಡಪ್ಪನ ಗಲ್ಲಿಯಲ್ಲಿರುವ ಶ್ರೀ ವೀರಪ್ಪ ಬಿಜ್ಜೂರು ಇವರ ಮನೆಯಲ್ಲಿ ಸ್ಥಾಪಿಸಿದ ಶ್ರೀ ವೀರಭದ್ರೇಶ್ವರ ಮೂರ್ತಿಯ 21ನೇ ವಾರ್ಷಿಕೋತ್ಸವ ಹಾಗೂ ಆರಾಧಕರಾದ ಶ್ರೀಮತಿ ಗುರುಬಾಯಮ್ಮನವರ 6ನೇ ವರ್ಷದ ಪುಣ್ಯಸ್ಮರಣೆಯ ಧಾರ್ಮಿಕ ಸಮಾರಂಭದ ಅಂಗವಾಗಿ ಲೋಕ ಕಲ್ಯಾಣಾರ್ಥ ಹಾಗೂ ವಿಶ್ವಶಾಂತಿಗಾಗಿ ಶ್ರೀ ವೀರಭದ್ರೇಶ್ವರ ಗುಗ್ಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಶಿಕ್ಷೆ ಇಲ್ಲದ ಶಿಕ್ಷಣ, ಭೀತಿ ಇಲ್ಲದ ಸಂವಿಧಾನದ ಮಧ್ಯೆ ಬದುಕುವ ನಾವುಗಳು ಪರಸ್ಪರ ಗೌರವಾದರಗಳನ್ನು ಮರೆಯುತ್ತಿದ್ದೇವೆ ಎಂದರು.
ಶಿವನನ್ನು ನಿಂದನೆ ಮಾಡುವವರಿಗೆ ಶಿಕ್ಷೆ ನೀಡಿ ಸದ್ಗತಿ ಮೂಲಕ ನಿಜವಾದ ಮಾರ್ಗ ತೋರಿಸುವ ಶ್ರೀ ವೀರಭದ್ರನು ತನ್ನ ಲೀಲಾ ಪವಾಡಗಳನ್ನು ತೋರಿಸಿ ಶಿವನ ಇಚ್ಛಾಶಕ್ತಿಯನ್ನು ಪರಿಚಯಿಸುವ ಮುಕ್ಕೋಟಿ ದೇವತೆಗಳಲ್ಲಿ ಗಣಾಧಿಪತಿಗಳಲ್ಲಿ ಗಣನಾಯಕ ಅದು ವೀರಭದ್ರೇಶ್ವರ ಮಾತ್ರ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ, ಹರಿಹರ ನಗರಸಭೆಯ ಇಂಜಿನಿಯರ್ ಎಸ್.ಎಸ್. ಬಿರಾದಾರ್, ಜಿಲ್ಲಾ ಖಾಲಿ ಚೀಲ ವ್ಯಾಪಾರಿಗಳ ಸಂಘದ ಗೌ. ಅಧ್ಯಕ್ಷ ಟಕ್ಕಳಕಿ ವೀರಣ್ಣ, ಅಕ್ಕಿ ವರ್ತಕ ಕೊಟ್ರೇಶ್, ಆನಂದ್, ಈರಣ್ಣ, ಪ್ರಕಾಶ ರಕ್ಕಸಗಿ, ಪುರಂತರರುಗಳಾದ ಹಾಲೇಶಪ್ಪ, ಕದರಮಂಡಲಗಿ ಈರಪ್ಪ, ರಾಜಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಲಿಂಗರಾಜ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಕರಿಬಸಪ್ಪ ವಂದಿಸಿದರು.