ದಾವಣಗೆರೆ, ಜು.18- ಗ್ರಾಮ ದಲ್ಲಿನ ಕೊಳಚೆ ನೀರೆಲ್ಲವೂ ಜಮೀನು ಗಳಿಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಮೀನಿನ ರೈತರಿಗೆ ಸಂಕಷ್ಟವನ್ನು ತರಿಸಿದ್ದು, ಇದರಿಂದ ಪಾರು ಮಾಡುವಂತೆ ಅಳಲು ಕೇಳಿ ಬರುತ್ತಿದೆ.
ನಗರಕ್ಕೆ ಸಮೀಪದ ಯರಗುಂಟೆಯ ಅಶೋಕ ನಗರದಲ್ಲಿ ಸರ್ವೆ ನಂ. 78, 80, 83, 84ರ ಜಮೀನುಗಳಿಗೆ ಯರಗುಂಟೆಯ ಕೊಳಚೆ ನೀರು ಹರಿಯುತ್ತಿದ್ದು, ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯೇ ಇದಕ್ಕೆ ಕಾರಣ ಎಂಬ ಆರೋಪ ವ್ಯಕ್ತವಾಗುತ್ತಿದೆ.
ಮೊದಲೇ ಕೊರೊನಾ ಜನರ ಪ್ರಾಣಕ್ಕೆ ಕುತ್ತು ತರುತ್ತಿರುವ ಈ ಸಂದರ್ಭದಲ್ಲಿ ಅಸಮರ್ಪಕ ಕೊಳಚೆ ನೀರು ಹರಿಯುವಿಕೆಯಿಂದಾಗಿ ಮಾರಕ ಕ್ರಿಮಿಕೀಟಗಳ ಉತ್ಪತ್ತಿಗೆ ಮತ್ತು ಮಾರಕ ಕಾಯಿಲೆಗಳ ಉಲ್ಭಣಕ್ಕೆ ದಾರಿ ಮಾಡಿಕೊಟ್ಟಂತಾಗಲಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ.
ಇದೀಗ ಮುಂಗಾರು ಸಮಯವಾಗಿರುವುದರಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ನಾನಾ ಬೆಳೆಗಳನ್ನು ಬೆಳೆದು ಫಲದ ಕನಸು ಕಾಣುತ್ತಿರುವಾಗ ಜಮೀನುಗಳಿಗೆ ಕೊಳಚೆ ನೀರು ಹರಿಯುತ್ತಿರುವುದರಿಂದ ಬೆಳೆಗಳ ನಾಶದ ಜೊತೆಗೆ ಮಾರಕ ಕಾಯಿಲೆಗಳು ತಗುಲುವ ಆತಂಕ ರೈತರಲ್ಲಿ ಮನೆ ಮಾಡಿದೆ. ಜಮೀನುಗಳಿಗೆ ಕೊಳಚೆ ನೀರು ಹರಿಯುವುದರಿಂದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿ ಕಣ್ಣೀರಿಡುವಂತೆ ಮಾಡಿದೆ ಎಂಬುದಾಗಿ ಬೇಸರ ವ್ಯಕ್ತವಾಗಿದೆ.
ಜಮೀನುಗಳಿಗೆ ಹರಿಯುತ್ತಿರುವ ಕೊಳಚೆ ನೀರಿನ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆ ಮುಕ್ತಿ ಹಾಡಿ, ಅನ್ನದಾತರಾದ ರೈತರ ಬಾಳಿಗೆ ನೆಮ್ಮದಿ ನೀಡಬೇಕೆಂಬ ಕಳಕಳಿಯೂ ಕೇಳಿ ಬರುತ್ತಿದೆ. ಜಮೀನುಗಳಿಗೆ ಕೊಳಚೆ ನೀರು ಹರಿಯುತ್ತಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿರುವುದಾಗಿ ಅಳಲಿಟ್ಟಿರುವ ಜಮೀನಿನ ರೈತರು, ಈ ಸಮಸ್ಯೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂಬ ಮನವಿಯನ್ನೂ ಮಾಡಿದ್ದಾರೆ.