ಮಾಲೂರು ನಗರ ಸಭೆ ಯೋಜನಾ ನಿರ್ದೇಶಕ ಕೃಷ್ಣಪ್ಪ ನಿವಾಸಗಳಲ್ಲಿ ದಾಳಿ
ದಾವಣಗೆರೆ, ಜು.15- ಜಿಲ್ಲೆಯ ಚನ್ನಗಿರಿ ತಾಲ್ಲೂಕು ಸೇರಿದಂತೆ ಐದು ಕಡೆಗಳಲ್ಲಿ ಏಕಕಾಲಕ್ಕೆ ಕೋಲಾರ ಜಿಲ್ಲೆಯ ಮಾಲೂರು ನಗರ ಸಭೆಯ ಯೋಜನಾ ನಿರ್ದೇಶಕ ಹೆಚ್.ಆರ್. ಕೃಷ್ಣಪ್ಪ ಅವರ ಮನೆಗಳು, ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡ ಇಂದು ಬೆಳಿಗ್ಗೆ ದಾಳಿ ಮಾಡಿದೆ.
ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಶಿವಮೊಗ್ಗ ಡಿವೈಎಸ್ಪಿ ಲೋಕೇಶ್, ಇನ್ಸ್‍ಪೆಕ್ಟರ್ ವಸಂತ ಹಾಗೂ ಸಿಬ್ಬಂದಿಗಳ ತಂಡವು ಕೃಷ್ಣಪ್ಪ ಅವರ ಸ್ವಗ್ರಾಮವಾದ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯ ಮನೆ, ಕೋಲಾರ ಜಿಲ್ಲೆಯ ಮಾಲೂರು ಮನೆ ಮತ್ತು ಕಚೇರಿ, ಶಿವಮೊಗ್ಗ ಜಿಲ್ಲೆಯ ಮನೆ, ಬೆಂಗಳೂರಿನ ವಿಜಯನಗರದಲ್ಲಿ ಸೇರಿ ಐದು ಕಡೆಗಳಲ್ಲಿ ದಾಳಿ ನಡೆಸಿ, ದಾಖಲೆ ಹಾಗೂ ಆಸ್ತಿ ಪತ್ರಗಳ ಪರಿಶೀಲನೆ ನಡೆಸಿದ್ದು, ಸುಮಾರು ಒಂದು ಕೆ.ಜಿ.ಯಷ್ಟು ಬಂಗಾರ, ನಿವೇಶನ ಪತ್ರಗಳು ದೊರೆತಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಕೃಷ್ಣಪ್ಪ ಅವರು ಮೂಲತಃ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದವರಾಗಿದ್ದಾರೆ. ನಗರದಲ್ಲೂ ವಾಸವಿದ್ದರು ಎಂದು ಹೇಳಲಾಗಿದ್ದು, ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ, ನುಗ್ಗೇಹಳ್ಳಿ ಗ್ರಾಮದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಐಷಾರಾಮಿ ಬಂಗ್ಲೆ ಹಾಗೂ ದೇವರಹಳ್ಳಿ ಗ್ರಾಮದಲ್ಲಿ ತೋಟ ಸೇರಿದಂತೆ ಅಪಾರ ಪ್ರಮಾಣದಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಆರೋಪದಡಿ ದಾಖಲೆಗಳ ಪರಿಶೀಲನೆಯನ್ನು ಎಸಿಬಿ ಅಧಿಕಾರಿಗಳು ಮಾಡಿದ್ದಾರೆ.
ಅಡಿಕೆ ತೋಟ ಬೇರೆ ಬೇರೆ ಕಡೆ ನಿರ್ಮಿಸಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದ್ದು, ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದ ತಂಡದಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಕೃಷ್ಣಪ್ಪನವರು ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದಲ್ಲೂ ಈ ಹಿಂದೆ ಕಾರ್ಯ ನಿರ್ವಹಿಸಿದ್ದರು. ಇವರ ಶಿವಮೊಗ್ಗದ ಶಿವಪ್ಪ ನಾಯಕ ಬಡಾವಣೆಯ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಕೃಷ್ಣಪ್ಪನವರು ಶಿವಮೊಗ್ಗದ ಮನೆಯನ್ನು ಬಾಡಿಗೆಗೆ ನೀಡಿದ್ದಾರೆ. ಇವರು ಇದೇ ಮನೆಯ ಮೇಲ್ಭಾಗದ ಒಂದು ಕೋಣೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು ಎನ್ನಲಾಗುತ್ತಿದ್ದು, ಇದರಿಂದ ಕೋಣೆಯ ತಪಾಸಣೆ ನಡೆಸಿದ್ದಾರೆ.