ದಾವಣಗೆರೆ, ಜು.15 – ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ತಮಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿರುವ ಅವರು, ತಾವು ಇಲ್ಲಿಯವರೆಗೂ ಪಕ್ಷಾಂತರಗೊಳ್ಳದೆ ಕಾಂಗ್ರೆಸ್ನ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾಗಿ ತಿಳಿಸಿದ್ದಾರೆ.
ಹರಪನಹಳ್ಳಿ, ಭರಮಸಾಗರ, ಮಾಯಕೊಂಡ ವಿಧಾನಸಭಾ ಮೀಸಲು ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಹಾಗೂ ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರದಿಂದ ಸಂಸದರ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಕೋರಿ ಕಳೆದ ಎರಡ್ಮೂರು ದಶಕಗಳಿಂದ ಐದಾರು ಬಾರಿ ಮನವಿ ಮಾಡಿದಾಗ ಪಕ್ಷದ ನಾಯಕರು ಮುಂದಿನ ದಿನಗಳಲ್ಲಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಇದುವರೆಗೂ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಪರಿಶಿಷ್ಟ ಜನಾಂಗಕ್ಕೆ ಸೇರಿರುವವರಿಗೆ ಇಲ್ಲಿಯವರೆಗೂ ಯಾವುದೇ ಪ್ರಾತಿನಿಧ್ಯ ಹಾಗೂ ಉನ್ನತ ಸ್ಥಾನಗಳನ್ನು ನೀಡದೇ ಪಕ್ಷವು ನಮ್ಮ ಸಮಾಜವನ್ನು ಕಡೆಗಣಿಸಿದೆ. ಇನ್ನಾದರೂ ತಮ್ಮ ಸೇವೆಯನ್ನು ಪರಿಗಣಿಸಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮೀಸಲು ಸ್ಥಾನಕ್ಕೆ ಟಿಕೆಟ್ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಮುಖಂಡ ಸೀಮೆಎಣ್ಣೆ ಮಲ್ಲೇಶ್ ಉಪಸ್ಥಿತರಿದ್ದರು.