ದೇಶದಲ್ಲಿ ಆರ್ಥಿಕ ಪ್ರಗತಿ ಜೊತೆ ನೈತಿಕತೆಯೂ ಮುಖ್ಯ

ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಹೆಚ್.ಎನ್. ನಾಗಮೋಹನ್‌ದಾಸ್

ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಅವರಿಗೆ 2020ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

ದಾವಣಗೆರೆ, ಫೆ.20- ದೇಶ ಕೇವಲ ಆರ್ಥಿಕವಾಗಿ ಪ್ರಗತಿ ಹೊಂದಿದರೆ ಸಾಲದು, ಅದರೊಟ್ಟಿಗೆ ಮಾನವೀಯತೆ, ನೈತಿಕತೆಯ ಅಗತ್ಯವೂ ಇದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ಪ್ರತಿಪಾದಿಸಿದರು.

ಜಿಲ್ಲಾ ಸಮಾಚಾರ ದಿನಪತ್ರಿಕೆ ಬಳಗದಿಂದ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ 2020ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ, ನ್ಯಾಯಾಂಗ, ಮಾಧ್ಯಮ, ವೈದ್ಯಕೀಯ  ಸೇರಿದಂತೆ ದೇಶದ ಪ್ರತಿ ಕ್ಷೇತ್ರಗಳಲ್ಲೂ ನೈತಿಕ ದಿವಾಳಿತನ ಕಾಡುತ್ತಿದೆ. ನೈತಿಕ ಮೌಲ್ಯ ಕಟ್ಟಿ ಬೆಳೆಸದಿದ್ದರೆ ನಮ್ಮೆಲ್ಲಾ ಆರ್ಥಿಕ ಪ್ರಗತಿ ಕುಸಿದು ಬೀಳುತ್ತದೆ ಎಂದು ಎಚ್ಚರಿಸಿದರು.

ಭಾರತ ಹಿಂದಿಗಿಂತಲೂ ಈಗ ಶ್ರೀಮಂತವಾಗಿದೆ. ಆದರೆ ಶ್ರೀಮಂತಿಕೆ ಕೆಲವೇ ಜನರ ಕೈಯ್ಯಲ್ಲಿದೆ. ದೇಶದ ಶೇ.8ರಷ್ಟು ಸಂಪತ್ತು ಶೇ.10 ರಷ್ಟು ಜನರ ಹಿಡಿತದಲ್ಲಿದೆ. ಉಳಿದ ಶೇ.20 ರಷ್ಟು ಸಂಪತ್ತು ಶೇ.90 ರಷ್ಟು ಜನರ ಕೈಯ್ಯಲ್ಲಿದೆ. ಇದರಿಂದಾಗಿ ದೇಶದಲ್ಲಿ ಅಸಮಾನತೆ ಹೆಚ್ಚಾಗಿದೆ ಎಂದರು.

ದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆ ಪತ್ರಿಕಾ ಸ್ವಾತಂತ್ರ್ಯದ ಹೋರಾಟವೂ ನಡೆದಿದೆ.  ಸ್ವಾತಂತ್ರ್ಯಾ ನಂತರ ಪಾಳೆಗಾರಿಕೆ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರಿವರ್ತಿಸುವಲ್ಲಿ ಮಾಧ್ಯಮ ಕ್ಷೇತ್ರ ಮಹತ್ವದ ಪಾತ್ರ ವಹಿಸಿದೆ.  ಆದರೆ ಈಗ ಸೇವಾ ಕ್ಷೇತ್ರವಾಗಿದ್ದ ಮಾಧ್ಯಮ ಕ್ಷೇತ್ರವೂ ಖಾಸಗೀ ಕ್ಷೇತ್ರವಾಗಿದೆ. ಬಂಡವಾಳದಾರರು ಪ್ರವೇಶವಾಗಿ, ಹೆಚ್ಚು ಲಾಭ ಗಳಿಸಲು, ಟಿಆರ್‌ಪಿ, ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲು ರೋಚಕ ಸುದ್ದಿಗಳಿಗೆ ಆದ್ಯತೆ ನೀಡುತ್ತಿವೆ. ಯುವ ಪ್ರತಿಭೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲೂ ಜಿಲ್ಲಾ ಸಮಾಚಾರದಂತಹ ಸ್ಥಳೀಯ, ಪ್ರಾದೇಶಿಕ ಪತ್ರಿಕೆಗಳು ಸಮಾಜದಲ್ಲಿ  ಸ್ಥಾನ ಉಳಿಸಿಕೊಂಡಿವೆ ಎಂದರು.

ವಾಣಿಜ್ಯೀಕರಣವಾಗುತ್ತಿರುವ ವಕೀಲ ವೃತ್ತಿ

ವಕೀಲ ವೃತ್ತಿ ಸೇವಾ ವೃತ್ತಿಯಿಂದ ವಾಣಿಜ್ಯೀ ಕರಣವಾಗುತ್ತಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ಹೇಳಿದರು.

 ಜನರು ನ್ಯಾಯಾಂಗದಿಂದ ಗುಣಾತ್ಮಕ, ಶೀಘ್ರ ಹಾಗೂ ಕಡಿಮೆ ಖರ್ಚಿನ ನ್ಯಾಯ ಬಯಸುತ್ತಿದ್ದಾರೆ. ಇದಕ್ಕೆ ನ್ಯಾಯವಾದಿಗಳು ಸ್ಪಂದಿಸಿದಾಗ ಜನ ಸಾಮಾನ್ಯರ ಪ್ರೀತಿ, ವಿಶ್ವಾಸ, ಗೌರವವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು. ವಕೀಲರು ಪ್ರಕರಣಗಳ ರಾಜೀಗೆ ಆದ್ಯತೆ ನೀಡಿದರೆ ಸಮಾಜಕ್ಕೆ ಹೆಚ್ಚಿನ ಉಪಯೋಗವಿದೆ ಎಂದರು.

ಗಾಂಧೀಜಿ ವಕೀಲರಾಗಿದ್ದ ವೇಳೆ ಪ್ರಕರಣ ವೊಂದರ ವಕಾಲತ್ತು ವಹಿಸಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾಗ ಪ್ರಕರಣವನ್ನು ರಾಜೀ ಮೂಲಕ ಬಗೆ ಹರಿಸಿದ್ದರು. ಅದು ಅಲ್ಲಿನ ನ್ಯಾಯಾಂಗ, ಜನತೆಯ ವಿಶ್ವಾಸಕ್ಕೆ ಪಾತ್ರವಾಗಿತ್ತು ಎಂದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ, ನೆಹರು, ಪಟೇಲ್ ಸೇರಿದಂತೆ ವಕೀಲರ ಸಮುದಾಯ ನೀಡಿದ ಕೊಡುಗೆ ಮಹತ್ವದ್ದು. ಅಲ್ಲದೆ ಕರ್ನಾಟಕದ 22 ಮುಖ್ಯಮಂತ್ರಿಗಳ ಪೈಕಿ 19 ಜನರು ನ್ಯಾಯವಾದಿಗಳೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ಸಮಾಚಾರ ಬಳಗ ಪ್ರಥಮವಾಗಿ ನ್ಯಾಯವಾದಿಯೊಬ್ಬರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.

ಕಾನೂನು ಅರಿವು ಮೂಡಿಸುವುದು ಅಗತ್ಯ : ದೇಶದಲ್ಲಿ 1947ರಲ್ಲಿ ಸಾಕ್ಷರತೆ ಪ್ರಮಾಣ ಶೇ.20 ರಷ್ಟಿತ್ತು. 1979ರಲ್ಲಿ ಶೇ.80ರಷ್ಟು ಹೆಚ್ಚಾಗಿದೆ. ಆದರೆ ಅನೇಕರಲ್ಲಿ ಕಾನೂನಿನ ಅರಿವಿಲ್ಲ. ಆದ್ದರಿಂದ ನ್ಯಾಯ ವಾದಿಗಳು, ನ್ಯಾಯಾಧೀಶರು ಕಾನೂನು ಅರಿವು ಮೂಡಿ ಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.

ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ನಿ ಕಸ್ತೂರಿಬಾಯಿ ಉಪಸ್ಥಿತರಿದ್ದರು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಐರಣಿ ಬಸವರಾಜ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಜಿಲ್ಲೆ ಸಮಾಚಾರ ಪತ್ರಿಕೆ ಸಂಪಾದಕರೂ, ಬಳಗದ ಸಂಸ್ಥಾಪಕ ವಿ.ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತ ನಾಡಿದರು.  ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಜಸ್ಟಿನ್ ಡಿಸೌಜ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಡಾ. ಈಶ್ವರ ಶರ್ಮ ಉಪಸ್ಥಿತರಿದ್ದರು.

ಬಳಗದ ಗೌರವ ಅಧ್ಯಕ್ಷ ಎನ್.ಟಿ. ಯರ್ರಿಸ್ವಾಮಿ ಬಳಗ ಬೆಳೆದು ಬಂದ ದಾರಿ ವಿವರಿಸಿದರು. ಸಿ.ಕೆ. ಆನಂದತೀರ್ಥಾಚಾರ್ ಸ್ವಾಗತಿಸಿದರು. ಸಾಲಿಗ್ರಾಮ ಗಣೇಶ್ ಶೆಣೈ ನಿರೂಪಿಸಿದರು. ಸುಜಾತ ಬಸವರಾಜ್ ತಂಡದವರು ಪ್ರಾರ್ಥಿಸಿದರು.

error: Content is protected !!