ದಾವಣಗೆರೆ, ಫೆ.20- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳು ಮೇಲ್ನೋಟಕ್ಕೆ ರೈತರ ಪರ ಎಂದು ಭಾವಿಸಿದರೂ ಕರಾಳ ಅಂಶಗಳನ್ನು ಒಳಗೊಂಡಿದ್ದು, ಈ ಕಾಯ್ದೆಗಳಿಂದ ರೈತರ ಆದಾಯ ದ್ವಿಗುಣಗೊಳ್ಳುವ ಬದಲಿಗೆ ಕೃಷಿಯಿಂದಲೇ ಸಂಪೂರ್ಣ ವಿಮುಖರಾಗಬೇಕಾಗಲಿದೆ ಎಂದು ಹಿರಿಯ ಪತ್ರಕರ್ತ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ (ಹುಚ್ಚವ್ವಹಳ್ಳಿ ಮಂಜುನಾಥ್ ಬಣ) ವತಿ ಯಿಂದ ಕೃಷಿ ಕಾಯ್ದೆಗಳ ತಿದ್ದುಪಡಿ ಕುರಿತು ನಿನ್ನೆ ಹಮ್ಮಿ ಕೊಂಡಿದ್ದ ವಿಚಾರ ಸಂಕಿರಣದಲ್ಲಿ ‘ಕೃಷಿ ಕಾಯ್ದೆಗಳ ಇಂದಿನ ರಾಜಕೀಯ ಹುನ್ನಾರ’ ವಿಷಯ ಕುರಿತು ಮಾತನಾಡಿದರು.
ಕೇಂದ್ರ ಸರ್ಕಾರದ ಎಪಿಎಂಸಿ ಕಾಯಿದೆ ತಿದ್ದುಪಡಿ, ಗುತ್ತಿಗೆ ಬೇಸಾಯ ಪದ್ಧತಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಮತ್ತು ಅಗತ್ಯ ವಸ್ತುಗಳ ಕಾಯ್ದೆಗಳು ದೇಶದ ಕೃಷಿ ವ್ಯವಸ್ಥೆಯನ್ನು ಸುಧಾರಿಸುವ ಬದಲು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿಸಲಿವೆ. ರೈತೋತ್ಪನಗಳಿಗೆ ಬೆಲೆ ಇಲ್ಲದಿರುವುದು, ಸರ್ಕಾರಗಳಿಂದ ಪ್ರೋತ್ಸಾಹ ಸಿಗದೇ ಇರುವ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಈ ಕಾಯ್ದೆ ಹಂತ ಹಂತವಾಗಿ ಖಾಸಗಿ ಮಂಡಿಗಳಿಗೆ ಮಣೆ ಹಾಕಿ ಇದೀಗ ಇರುವ ಎಪಿಎಂಸಿ ವ್ಯವಸ್ಥೆಯನ್ನೆ ಸಂಪೂರ್ಣ ನಾಶ ಪಡಿಸಲಿದೆ. ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಇಲ್ಲದಿ ರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದರು.
ಎಐಟಿಯುಸಿ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಿದ್ದುಪಡಿ ಕಾಯ್ದೆಗಳ ಪರಿಣಾಮಗಳ ಬಗ್ಗೆ ರೈತರಿಗೆ ಹೆಚ್ಚು ಅರಿವಿರಬೇಕು. ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿ ರಾವಣನಂತೆ ಆಡಳಿತ ನಡೆಸುತ್ತಿದ್ದಾರೆ. ಮೀಸಲಾತಿ ಸಿಕ್ಕರೂ ಕೂಡ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟ. ಸರ್ಕಾರ ಎಲ್ಲವನ್ನೂ ಖಾಸಗಿಗೆ ವಹಿಸುವ ಸಂಚು ನಡೆಸಿದೆ. ಆದ್ದರಿಂದ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿರುವ ಸ್ವಾಮೀಜಿಗಳು ತಮ್ಮ ಹೋರಾಟದಲ್ಲಿ ಖಾಸಗೀಕರಣ ವಿರೋಧಿ ಮತ್ತು ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಅಂಶಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಿಪಿಐ ರಾಜ್ಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಮಾತನಾಡಿ, ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಬಂಡವಾಳ ಶಾಹಿಗಳು ಭೂ ಒಡೆಯರಾಗಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಕೃಷಿಕನೇ ಇಲ್ಲದ ಕೃಷಿ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದ್ದಾರೆಂದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಇಂದು ಬಹುತೇಕ ಮಾಧ್ಯಮ ಕ್ಷೇತ್ರವನ್ನು ರಾಜಕಾರಣಿಗಳು ಆವರಿಸಿಕೊಂಡಿದ್ದಾರೆ. ಹಾಗಾಗಿ ಅವರು ತಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು ಜನರಿಗೆ ತಲುಪಿಸಿ ಸುಳ್ಳನ್ನು ಸತ್ಯವಾಗಿಸುತ್ತಿದ್ದಾರೆ. ರಾಜಕಾರಣಿಗಳು ಕೂಡ ಒಂದೇ ವರ್ಷ ರೈತರಂತೆ ಬೆಳೆ ಬೆಳೆದು ತೋರಿಸಿದರೆ ಕೃಷಿ ಕ್ಷೇತ್ರದ ಸಮಸ್ಯೆಗಳು ಅವರ ಅರಿವಿಗೆ ಬರುತ್ತವೆ ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ಚನಹಳ್ಳಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮರಿಯಮ್ಮನಹಳ್ಳಿ ಪರಶುರಾಮ್, ಖಾಜಿ ನಿಯಾಜ್, ಮಲ್ಲಶೆಟ್ಟಿಹಳ್ಳಿ ಪ್ರಕಾಶ್, ಚಿರಂಜೀವಿ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತರು ಭಾಗವಹಿಸಿದ್ದರು. ಹುಚ್ಚವ್ವನಹಳ್ಳಿ ಪ್ರಕಾಶ್ ನಿರೂಪಿಸಿದರು.