ಲೋಕಿಕೆರೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ
ಕೂಡ್ಲಿಗಿ, ಫೆ.20-ಗ್ರಾಮದ ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿ ಸುವ ಪ್ರಯತ್ನವನ್ನು ತಾಲ್ಲೂಕು ಆಡಳಿತ ಮಾಡ ಲಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿ ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೂಡ್ಲಿಗಿ ತಾಲ್ಲೂಕಿನಲ್ಲಿ ಎರಡು ಮುಖ್ಯವಾದ ಸವಾಲುಗಳು ಇದ್ದವು. ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲ್ಲೂಕನ್ನು ಸೇರ್ಪಡೆ ಮಾಡುವುದು ಹಾಗೂ ಮತ್ತೊಂದು, ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ವಿಜಯನಗರಕ್ಕೆ ಕೂಡ್ಲಿಗಿ ತಾಲ್ಲೂಕು ಸೇರ್ಪಡೆಯಾಗಿದೆ. ಕೆರೆಗಳಿಗೆ ನೀರು ತುಂಬಿಸುವ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು, ನೀರು ತುಂಬಿಸುವ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ತಹಶೀಲ್ದಾರ್ ಮಹಾಬಲೇಶ್ವರ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪ್ರತಿ ತಿಂಗಳು ಎರಡನೇ ಶನಿವಾರ ಗ್ರಾಮವೊಂದಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸುವ ಕಾರ್ಯಕ್ರಮ ಇದಾಗಿದೆ. ಇಂದು ಕಂದಾಯ ಇಲಾಖೆ ಸೇರಿದಂತೆ ಇತರೆ ಎಲ್ಲಾ ಅಧಿಕಾರಿಗಳು ಇಲ್ಲಿ ಬೀಡುಬಿಟ್ಟಿದ್ದು, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಸೇರಿದಂತೆ ನಾನಾ ಯೋಜನೆಯನ್ನು ಗ್ರಾಮಸ್ಥರಿಗೆ ತಿಳಿಸಿ ಅವರಿಂದ ಅರ್ಜಿ ಪಡೆದು ಬಗೆಹರಿಸುತ್ತೇವೆ. ಲೋಕಿಕೆರೆ ಗ್ರಾಮದಲ್ಲಿ ಪಡಿತರ ತರಲು ಐದು ಕಿಲೋ ಮೀಟರ್ ಹೋಗಿ ತರಬೇಕಿತ್ತು. ಅದನ್ನು ಈಗಾಗಲೇ ಬಗೆಹರಿಸಿದ್ದು ಇಲ್ಲಿಯೇ ಪಡಿತರ ಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಚನ್ನಬಸಮ್ಮ, ಉಪಾಧ್ಯಕ್ಷೆ ಗಂಗಮ್ಮ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಎಚ್. ರೇವಣ್ಣ, ಇಒ ಬಸಣ್ಣ, ತಾ.ಪಂ. ಸದಸ್ಯರಾದ ಪಾಪನಾ ಯಕ, ನೇತ್ರಮ್ಮ ಓಬಣ್ಣ, ಗ್ರಾ.ಪಂ. ಸದಸ್ಯರಾದ ಭಾಗ್ಯಮ್ಮ, ಅನಸೂಯಮ್ಮ, ತಿಪ್ಪೇಸ್ವಾಮಿ, ದುರುಗಮ್ಮ, ದಾಸಪ್ಪ, ಬಸವರಾಜ್ ಹಾಗೂ ಉಪ ತಹಶೀಲ್ದಾರ್ ಚಂದ್ರಮೋಹನ್ ಮತ್ತಿತ ರರು ಸಭೆಯಲ್ಲಿ ಇದ್ದರು. ತಳವಾರ ಶರಣಪ್ಪ ನಿರೂಪಿಸಿದರು. ಸ್ವಾಮಿ ಸ್ವಾಗತಿಸಿದರು.
ಯುವ ಲೇಖಕನಿಂದ ಏಕಾಂಗಿ ಹೋರಾಟ: ಲೋಕಿಕೆರೆ ಗ್ರಾಮದ ಯುವ ಲೇಖಕ ಧನಂಜಯ ಅವರು ಒಬ್ಬಂಟಿಯಾಗಿ ಆಡಳಿತದ ವಿರುದ್ಧ ಪೋಸ್ಟರ್ ಹಿಡಿದು ಗ್ರಾಮದಲ್ಲಿನ ಗೋಮಾಳವನ್ನು ಉಳ್ಳವರು ಉಳುಮೆ ಮಾಡುತ್ತಿದ್ದಾರೆ ಇದನ್ನು ಪರಿಶೀಲನೆ ಮಾಡಬೇಕು. ಅವರಿಂದ ಗೋಮಾಳ ಜಾಗವನ್ನು ಪಡೆದು ದನ ಕರುಗಳಿಗೆ ಮೇಯಲು ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನೆ ಮಾಡಿದರು. ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದರು.