ಸರ್ಕಾರದ ಸೌಲಭ್ಯಗಳು ಬಡವರಿಗೆ ಸಿಕ್ಕಾಗ ಮಾತ್ರ ಉದ್ಧಾರ ಸಾಧ್ಯ

ಗ್ರಾಮ ಪ್ರದಕ್ಷಿಣೆ ಮಾಡಿದ ಅಧಿಕಾರಿಗಳು ಜನರ ಸಮಸ್ಯೆ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

ಮಲೇಬೆನ್ನೂರು, ಫೆ.20- ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ನೇರವಾಗಿ ಸಿಕ್ಕಾಗ ಮಾತ್ರ ಜನರ ಉದ್ಧಾರ ಸಾಧ್ಯ. ಈ ನಿಟ್ಟಿನಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ಗ್ರಾಮ ವಾಸ್ತವ್ಯದ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದು ಶಾಸಕ ಎಸ್‌. ರಾಮಪ್ಪ ಹೇಳಿದರು.

ಅವರು ಶನಿವಾರ ನಿಟ್ಟೂರು ಗ್ರಾಮದಲ್ಲಿ ಹರಿಹರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಕಡೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಬಡವರು ಹಣ ನೀಡಬೇಕಾಗಿತ್ತು. ಅಲ್ಲದೆ ಸರ್ಕಾರದ ಸೌಲತ್ತುಗಳು ಅರ್ಹ ಫಲಾನುಭವಿಗಳ ಬದಲಾಗಿ ಉಳ್ಳವರ ಪಾಲಾಗುತ್ತಿದ್ದವು. ಇಂತಹ ಕಾರ್ಯಕ್ರಮ ಮಾಡುವುದರಿಂದ ಬಡವರ ಸಮಸ್ಯೆಗಳಿಗೆ ಪರಿಹಾರ ಸಿಗುವುದರ ಜೊತೆಗೆ ಸೌಲಭ್ಯಗಳೂ ಬಹಳ ಸುಲಭವಾಗಿ ಸಿಗಲಿವೆ.

ಗ್ರಾಮ ವಾಸ್ತವ್ಯವನ್ನು ಕಾಟಾಚಾರಕ್ಕಾಗಿ ಮಾಡದೆ ಪರಿಣಾಮಕಾರಿಯಾಗಿ ಮಾಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಶಾಸಕ ರಾಮಪ್ಪ ಅವರು, ಮುಂದಿನ ತಿಂಗಳು 3ನೇ ಶನಿವಾರ ಗ್ರಾಮ ವಾಸ್ತವ್ಯಕ್ಕೆ ಹಳ್ಳಿ ಆಯ್ಕೆ ಮಾಡುವ ಮುನ್ನ ನಮ್ಮ ಜೊತೆಗೆ ಚರ್ಚಿಸಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಅವರು, ಸರ್ಕಾರದ ಕಾರ್ಯಕ್ರಮಗಳು ಸಫಲವಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ. ಗ್ರಾಮ ವಾಸ್ತವ್ಯವನ್ನು ಕಂದಾಯ ಸಚಿವರ ಆಶಯದಂತೆ ಬಹಳ ವ್ಯವಸ್ಥಿತವವಾಗಿ ಹಮ್ಮಿಕೊಂಡಿದ್ದೇವೆ. ಗ್ರಾಮದ ಹಾಗೂ ಜನರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡುತ್ತೇವೆ ಎಂದರು.

ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ತಾ.ಪಂ. ಸದಸ್ಯ ಆದಾಪುರ ವೀರಭದ್ರಪ್ಪ, ಗ್ರಾ.ಪಂ. ಅಧ್ಯಕ್ಷೆ ಲೀಲಾ ಶಿವಕುಮಾರ್‌, ಉಪಾಧ್ಯಕ್ಷ ಎ.ಕೆ. ಹನುಮಂತಪ್ಪ, ಸದಸ್ಯರಾದ ಲಕ್ಷ್ಮಿದೇವಿ, ಸುನಂದಮ್ಮ, ವನಿತಾ ವಿಲಾಸ್‌, ಕಲ್ಲೇಶ್, ಗ್ರಾಮದ ಮುಖಂಡರಾದ ಕೆ.ಏಕಾಂತಪ್ಪ, ಬಿ.ಜಿ. ಧನಂಜಯ, ಹುರುಳಿ ಹನುಮಂತಪ್ಪ, ಕೆ. ಸಂಜೀವಮೂರ್ತಿ, ತಾ.ಪಂ. ಇಓ ಗಂಗಾಧರಪ್ಪ, ಟಿಹೆಚ್‌ಓ ಡಾ. ಚಂದ್ರಮೋಹನ್‌, ಸಹಾಯಕ ಕೃಷಿ ನಿರ್ದೇಶಕ ಗೋವರ್ಧನ್‌, ತೋಟಗಾರಿಕೆ ಇಲಾಖೆಯ ರೇಖಾ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಸ್ತೂರಿ, ಬೆಸ್ಕಾಂ ಎಇಇ ಲಕ್ಷ್ಮಣ, ಆಹಾರ ಇಲಾಖೆಯ ನಜರುಲ್ಲಾ, ಪಿಡಬ್ಲ್ಯೂಡಿ ಇಲಾಖೆಯ ಕೆ.ಎನ್‌. ಶಿವಮೂರ್ತಿ ಸಮಾಜ ಕಲ್ಯಾಣ ಇಲಾಖೆಯ ಪರಮೇಶ್‌ ಪುಟ್ಟಪ್ಪನವರ್‌, ಹಿಂದುಳಿದ ವರ್ಗಗಳ ಇಲಾಖೆಯ ಹೆಚ್‌.ಪಿ ಪಾಟೀಲ್‌, ದೇವರಬೆಳಕೆರೆ ವೈದ್ಯಾಧಿಕಾರಿ ಡಾ. ದರ್ಶನ್‌, ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ, ಎಎಸ್‌ಐ ಬಸವರಾಜಪ್ಪ, ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್‌, ಪಿಡಿಓ ಆರ್‌.ಕೆ. ಮೂರ್ತಿ, ಬಿಲ್‌ ಕಲೆಕ್ಟರ್‌ ಹಾಲೇಶ್‌, ಗ್ರಾಮ ಸೇವಕ ಮಾರುತಿ, ರಂಗನಾಥ್‌ ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗ್ರಾಮ ಲೆಕ್ಕಾಧಿಕಾರಿ ಭಾರತಿ ಪ್ರಾರ್ಥಿಸಿದರು, ಉಪತಹಶೀಲ್ದಾರ್‌ ಆರ್‌. ರವಿ ಸ್ವಾಗತಿಸಿದರು.

ಈ ವೇಳೆ ಅನೇಕ ಜನರು ವಿವಿಧ ಸೌಲಭ್ಯಗಳನ್ನು ಕೋರಿ ಅರ್ಜಿ ಸಲ್ಲಿಸಿದರೆ, ಮತ್ತೆ ಕೆಲವರು ತಮಗೆ ಆಗುತ್ತಿರುವ ತೊಂದರೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಸರ್ಕಾರಿ ಜಾಗದಲ್ಲಿರುವ ಅನಧಿಕೃತ ದನದ ಕೊಟ್ಟಿಗೆ, ಕಣ, ತಿಪ್ಪೆಗಳನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಿದ ತಹಶೀಲ್ದಾರ್‌ ರಾಮಚಂದ್ರಪ್ಪ ಅವರು, ಸಾರ್ವಜನಿಕರಿಗೆ ಮೀಸಲಿಟ್ಟಿರುವ ರುದ್ರಭೂಮಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ವಾರದೊಳಗೆ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿಸಿದರು.

ಆದೇಶ ಪತ್ರ : ವಿವಿಧ ಸೌಲಭ್ಯ ಕೋರಿ ಒಟ್ಟು 60 ಅರ್ಜಿಗಳು ಸ್ವೀಕೃತವಾಗಿದ್ದವು. ಆ ಪೈಕಿ 26 ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಸೇರಿದಂತೆ ಮತ್ತಿತರೆ ಸೌಲಭ್ಯಗಳ ಆದೇಶ ಪತ್ರಗಳನ್ನು ಸಂಜೆ ತಹಶೀಲ್ದಾರ್‌ ರಾಮಚಂದ್ರಪ್ಪ, ಉಪತಹಶೀಲ್ದಾರ್‌ ರವಿ ವಿತರಿಸಿದರು.

ಉದ್ಯೋಗ ಖಾತ್ರಿಯ ಜಾಬ್‌ ಕಾರ್ಡ್‌ಗಳನ್ನು ತಾ.ಪಂ. ಇಓ ಗಂಗಾಧರಪ್ಪ ನೀಡಿದರು.

ಎಫ್‌ಐಡಿ ಕಾರ್ಡ್‌ ಪಡೆಯಿರಿ : ಆಧಾರ್‌ ಕಾರ್ಡ್‌ ಮಾದರಿಯಲ್ಲಿ ಪ್ರತಿಯೊಬ್ಬ ರೈತರು ರೈತರ ಗುರುತಿನ ಚೀಟ (ಎಫ್ಐಡಿ) ಯನ್ನು ಪಡೆಯಲು ಆಧಾರ್‌ ಕಾರ್ಡ್‌, ಪಹಣಿ, ಬ್ಯಾಂಕ್‌ ಪಾಸ್‌ ಬುಕ್ ನೀಡಿ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ನೋಂದಣಿ ಮಾಡಿಸಿ ಎಂದು ಸಹಾಯಕ ಕೃಷಿ ನಿರ್ದೇಶಕ ಗೋವರ್ಧನ್‌ ಅವರು ರೈತರಿಗೆ ತಿಳಿಸಿದರು. 

ಅಧಿಕಾರಿಗಳ ವಾಸ್ತವ್ಯ : ಶನಿವಾರ ರಾತ್ರಿ ನಿಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಿರುವ ಅಧಿಕಾರಿಗಳು, ಭಾನುವಾರ ಬೆಳಿಗ್ಗೆ ಸ್ವಚ್ಛತಾ ಕಾರ್ಯಕ್ರಮ ಮಾಡಿ ತೆರಳಲಿದ್ದಾರೆ ಎಂದು ಉಪತಹಶೀಲ್ದಾರ್‌ ರವಿ ತಿಳಿಸಿದರು.


– ಜಿಗಳಿ ಪ್ರಕಾಶ್‌,
[email protected]

error: Content is protected !!