ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಪ್ರಶಂಸೆ
ದಾವಣಗೆರೆ, ಜು. 10- ಅಥಣಿ ಶಿವಯೋಗಿಗಳು ದೇಶ ಕಂಡ ಮಹಾನ್ ಶಿವಯೋಗಿಗಳಾಗಿದ್ದಾರೆ. ಅಧ್ಯಾತ್ಮ ರತ್ನವಾಗಿದ್ದಾರೆ. ನುಡಿಯೊಳಗೆ ನಡೆ ತುಂಬಿ, ನಡೆಯೊಳಗೆ ನುಡಿ ತುಂಬಿದ ಜ್ಞಾನದ ಕಡಲಾಗಿದ್ದಾರೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮುಕ್ತಕಂಠದಿಂದ ಪ್ರಶಂಸಿಸಿದರು.
ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಇಂದು ಏರ್ಪಾಡಾಗಿದ್ದ ಅಥಣಿ ಶಿವಯೋಗಿಗಳವರ 186ನೇ ಜಯಂತ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಶ್ರೀಗಳು ಆಶೀರ್ವಚನ ನೀಡಿದರು.
ಪ್ರತಿಯೊಬ್ಬ ವ್ಯಕ್ತಿಯು ಬದುಕಿನ ಜಂಜಾಟಕ್ಕೆ ಸಿಲುಕಿ, ಸಮಸ್ಯೆಗಳ ಮುಕ್ತಿಗಾಗಿ ಹಲವು ದೇವರನ್ನು ಸುತ್ತಾಡಿ ಬರುವನು. ಸುತ್ತಿ ಸುತ್ತಿ ಬರುವ ಬದಲು ಅತ್ತಲಿತ್ತ ಹರಿವ ಮನವನ್ನು ಇಷ್ಟಲಿಂಗದಲ್ಲಿ ನಿಲ್ಲಿಸಿದಾಗ ಬದುಕಿನ ಸಂಕಷ್ಟಗಳು ನಿವಾರಣೆಯಾಗುತ್ತವೆ. ಚಂಚಲ ಮನವನ್ನು ಗೆದ್ದು ಘನಮನವನ್ನಾಗಿಸಿಕೊಂಡು ಬಳಿ ಬಂದ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡಿದ ಮಹಾತ್ಮರು ಅಥಣಿ ಶಿವಯೋಗಿಗಳಾಗಿದ್ದಾರೆ ಎಂದು ಶ್ರೀಗಳು ಹೇಳಿದರು.
ನಮ್ಮ ನಾಡಿನ ಕಾವಿ ಕುಲಕ್ಕೆ ಕೀರ್ತಿ ತಂದಿರುವ ಒಬ್ಬ ಮಹಾನ್ ತಪಸ್ವಿ, ಶಿವಯೋಗದ ಶಕ್ತಿ ಅಥಣಿ ಶಿವಯೋಗಿಗಳಾಗಿದ್ದಾರೆ. ಅಂತಹ ಒಬ್ಬ ಶಿವಯೋಗಿಗಳನ್ನು ಸ್ಮರಿಸಿದರೆ ನಮ್ಮ ಪಾಪ, ಕಷ್ಟಗಳು ನಿವಾರಣೆಯಾಗುತ್ತವೆ. ಮಹಾತ್ಮರನ್ನು ಸ್ಮರಿಸಿದರೆ ಬದುಕಿಗೆ ಸದ್ಗತಿ ಸಿಗುತ್ತದೆ. ಮುಕ್ತಿ ಸಿಗಬೇಕು ಎಂದು ಭಕ್ತರು ಬಯಸುತ್ತಾರೆ. ಸತ್ತಾಗ ಮುಕ್ತಿ ಸಿಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಸತ್ತಾಗ ಮುಕ್ತಿ ಸಿಗುವ ಬದಲು, ವ್ಯಕ್ತಿ ಬದುಕಿದ್ದಾಗ ಮುಕ್ತಿ ಯನ್ನು ಅನುಭವಿಸಬೇಕು. ಮುಕ್ತಿ ಎಂದರೆ ನಿಶ್ಚಿಂತ ಸ್ಥಿತಿ. ಅದು ಧ್ಯಾನ, ಶಿವಯೋಗದಿಂದ ಸಿಗುತ್ತದೆ. ಪ್ರತಿ ಯೊಬ್ಬರು ಧ್ಯಾನ, ಶಿವಯೋಗ ಮಾಡಬೇಕು. ನಿಶ್ಚಿಂತರಾಗಬೇಕಾದರೆ ಬದುಕಿನ ಚಿಂತೆ ಬಿಡಬೇಕು. ಸಮಸ್ಯೆ ಗಳ ಚಿಂತೆಯನ್ನು ಬಿಟ್ಟು ಚಿಂತನೆ ಮಾಡಿದರೆ ಪರಿಹಾರವಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
ಭಜನಾ ಸಂಘದ ಅಧ್ಯಕ್ಷ ಜಯದೇವಪ್ಪ, ಜೆ. ಸೋಮನಾಥ್, ಬೂಸ್ನೂರು ಶಿವಯೋಗಿ, ಎಂ. ಜಯಕುಮಾರ್, ಕಣಕುಪ್ಪಿ ಮುರು ಗೇಶಪ್ಪ, ಅಂದನೂರು ಮುಪ್ಪಣ್ಣ, ಎಸ್. ಓಂಕಾರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.