ದಾವಣಗೆರೆ, ಜು.11- ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ‘ನಮ್ಮ ಊರು ನಮ್ಮ ಕೆರೆ’ ಯೋಜನೆಯಡಿ ತಾಲ್ಲೂಕಿನ ಕೈದಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಲ್ಕುಂಟೆ ಗ್ರಾಮದ ಕಿರು ಕೆರೆ ಹೂಳೆತ್ತುವ ಕಾಮಗಾರಿಗೆ ಇತ್ತೀಚಿಗೆ ಚಾಲನೆ ನೀಡಲಾಯಿತು.
ಕೋಲ್ಕುಂಟೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಕಿರು ಕೆರೆಯು ಸುಮಾರು 1.20 ಎಕರೆ ವಿಸ್ತೀರ್ಣ ಹೊಂದಿದ್ದು, ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ ತಿಳಿಸಿದ್ದಾರೆ.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ರಾಜ್ಯದಲ್ಲಿ ಅಭಿವೃದ್ಧಿ ಪಡಿಸುತ್ತಿರುವ 344 ನೇ ಕೆರೆ ಇದಾಗಿದೆ. ಸಂಸ್ಥೆಯ ಧನಸಹಾಯದಿಂದ ಹೂಳು ಹಾಗೂ ತ್ಯಾಜ್ಯ ತುಂಬಿದ ಕೆರೆಗಳಿಗೆ ಪುನಶ್ಚೇತನ ನೀಡಿ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆಯಲ್ಲದೆ ಅನ್ನದಾತರು ಹಾಗೂ ಗ್ರಾಮದ ಜನರಿಗೆ ವರದಾನವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಊರು ನಮ್ಮ ಕೆರೆ ಯೋಜನೆ ಕಾರ್ಯಗಳು ಗ್ರಾಮೀಣ ಜನರಿಗೆ ಸಂಜೀವಿನಿಯಂತಾಗಿದ್ದು, ಧರ್ಮ ಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.
ಗ್ರಾಮದ ಕಿರು ಕೆರೆಯ ಬಳಿಯಲ್ಲೇ ಶ್ರೀ ಆಂಜನೇಯ ಸ್ವಾಮಿ, ಶ್ರೀ ದುರ್ಗಾಂಬಿಕಾದೇವಿ, ಶ್ರೀ ಚೌಡಾಂಬಿಕಾದೇವಿ ದೇವಾಲಯಗಳು, ಶ್ರೀ ಬಸವೇಶ್ವರ ಗದ್ದುಗೆ ಇರುವುದಲ್ಲದೆ ವಿಶಾಲವಾದ ಜಾಗವನ್ನು ಒಳಗೊಂಡಿದೆ. ಹೀಗಾಗಿ ಕಿರು ಕೆರೆಯನ್ನು ಪುಷ್ಕರಣಿಯನ್ನಾಗಿ ರೂಪಿಸಿ ಕಾಯಕಲ್ಪ ನೀಡಬೇಕು, ಕೆರೆಯ ಸುತ್ತ ಗಿಡಗಳನ್ನು ನೆಟ್ಟು ಸುಂದರ ಪರಿಸರ ನಿರ್ಮಿಸಿದರೆ ಉತ್ತಮ ಪ್ರವಾಸಿ ತಾಣವಾಗಲಿದೆ ಎಂಬುದು ಗ್ರಾಮಸ್ಥರ ಆಶಯವಾಗಿದೆ.
ದೇವನಗರಿ ತಾಲ್ಲೂಕು ಯೋಜನಾಧಿಕಾರಿ ಬಾಬು, ಕೈದಾಳೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನವ್ಯ, ಉಪಾಧ್ಯಕ್ಷರಾದ ಆಶಾ ಬಸವರಾಜ್, ಪಿಡಿಓ ವಿದ್ಯಾವತಿ, ಗ್ರಾಮಾಭ್ಯುದಯ ಸಂಘದ ಮಂಜುನಾಥ ಗೌಡ್ರು, ಹೋಲೂರು ಮುರುಗೇಶ್, ಜಿ.ಹೆಚ್.ಅಶೋಕ್, ಕೆರೆ ಕಮಿಟಿ ಅಧ್ಯಕ್ಷ ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.