ವಿರಕ್ತಮಠದ ಕಾರ್ಯಕ್ರಮದಲ್ಲಿ ಶ್ರೀ ಬಸವ ಪ್ರಭು ಸ್ವಾಮೀಜಿ
ದಾವಣಗೆರೆ, ಫೆ.20- ಹರ್ಡೇಕರ್ ಮಂಜಪ್ಪನವರು ಒಬ್ಬ ವಿಭೂತಿ ಪುರುಷರು. ನಮ್ಮ ಕನ್ನಡ ನಾಡಿನ ಶ್ರೇಷ್ಠ ಸುಧಾರಕರು. ಅವರ ಪರಿಶುದ್ಧವಾದ ಜೀವನ ಮತ್ತು ಶ್ರೇಷ್ಠ ಬರಹಗಳು ನಾಡಿನ ಪ್ರಗತಿಗೆ ಒಂದು ದಾರಿ ದೀಪವಾಗಿವೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ವಿರಕ್ತಮಠದಲ್ಲಿ ಏರ್ಪಾಡಾಗಿದ್ದ ಹರ್ಡೇ ಕರ್ ಮಂಜಪ್ಪ ಅವರ 135ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸ್ವತಃ ಗಾಂಧೀಜಿಯವರು ತಮ್ಮ ಮೇಲೆ ವಿಧಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಶಿಸ್ತನ್ನು ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಅವಡಿಸಿಕೊಂಡಿದ್ದರು.
ಚರಕದಿಂದ ನೂಲುವುದು ಮತ್ತು ಖಾದಿ ಬಟ್ಟೆಯ ನೇಯ್ಗೆಯನ್ನು ಸಹಾ ತಮ್ಮ ದಿನಚರಿಯಾಗಿಸಿಕೊಂಡ ಮಂಜಪ್ಪನವರು ತಮ್ಮ `ಖಾದಿ ವಿಜಯ’ ಮಾಸ ಪತ್ರಿಕೆಯ ಮೂಲಕ ಖಾದಿ ಪ್ರಚಾರವನ್ನು ಕೈಗೊಂಡರು.
`ಖಾದಿಯ ವಿಜ್ಞಾನ’ ಎಂಬ ಗ್ರಂಥವನ್ನು ರಚಿಸಿದರು. ಆದ್ದರಿಂದಲೇ ಜನ ಇವರನ್ನು ಕರ್ನಾಟಕದ ಗಾಂಧಿ ಎಂದು ಕರೆದರು. ಮಂಜಪ್ಪನವರಿಗೆ ಬಸವ ತತ್ವವೇ ಅವರ ಉಸಿರು. ಬಸವ ತತ್ವಕ್ಕೆ ಶರಣಾಗಿ, ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 1913 ರಲ್ಲಿ ದಾವಣಗೆರೆ ವಿರಕ್ತಮಠದಲ್ಲಿ ಅಂದಿನ ಮಠಾಧೀಶರಾದ ಶ್ರೀ ಮೃತ್ಯುಂಜಯ ಅಪ್ಪಗಳೊಂದಿಗೆ ಆಚರಿಸಿದರು. ಬಸವ ಜಯಂತಿ ಆಚರಿಸುವ ಮೂಲಕ ವಿಶ್ವಕ್ಕೆ ಬಸವಣ್ಣನವರನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಬಸವ ತತ್ವ ಮತ್ತು ಗಾಂಧಿ ತತ್ವಗಳನ್ನು ಜೀವನದಲ್ಲಿ ಪಾಲಿಸಿದರು. ಬಸವ ಪ್ರಜ್ಞೆಯು ಅವರ ಹಣೆಯಲ್ಲಿ ಸದಾ ವಿಭೂತಿ ಇರುತ್ತಿತ್ತು. ಗಾಂಧಿ ಪ್ರಜ್ಞೆಯು ಅವರು ಗಾಂಧೀಜಿಯವರಂತೆ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಕಾಣಬಹುದು.
ಯುವಕರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಸದಾ ಪ್ರೇರಣೆಯನ್ನು ತುಂಬಲು ದಾವಣಗೆರೆಯಲ್ಲಿ ಪ್ರಿಂಟಿಂಗ್ ಪ್ರೆಸ್ ಪ್ರಾರಂಭಿಸಿ ಹುರಿದುಂಬಿಸಿದರು. ಯುವಕರಿಗೆ ಪವಿತ್ರರಾಗಿರಿ, ಧೀರರಾಗಿರಿ, ಸ್ವತಂತ್ರ ರಾಷ್ಟ್ರದ ವೀರರಾಗಿರಿ ಎಂದು ಕರೆ ನೀಡಿದ ಒಬ್ಬ ಮಹಾತ್ಮರಾಗಿದ್ದಾರೆ.
ಸಮಾಜದ ಮುಖಂಡರುಗಳಾದ ಎಂ.ಜಯಕುಮಾರ್, ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶಪ್ಪ, ನಿಜಗುಣ ಶಿವಯೋಗಿ, ಕುಂಟೋಜಿ ಚನ್ನಪ್ಪ, ರೋಷನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.