ಹರಪನಹಳ್ಳಿ: ಜನತೆಗೆ ದಂಡದ ಬಿಸಿ ಮುಟ್ಟಿಸಿದ ಅಧಿಕಾರಿಗಳು

ಹರಪನಹಳ್ಳಿ, ಏ.19- ತಾಲ್ಲೂಕಿನಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಮಾಸ್ಕ್, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಮಾಡುವುದನ್ನು ನಿರ್ಲಕ್ಷಿಸುತ್ತಿದ್ದು,  ಅಧಿಕಾರಿಗಳು  ಪಾದಯಾತ್ರೆ ಮೂಲಕ ಕೊರೊನಾ ಸೋಂಕು ಕುರಿತು ಜಾಗೃತಿ ಮೂಡಿಸಿ, ದಂಡ ವಸೂಲಿ ಮಾಡಿದರು.

ಪಟ್ಟಣದ ಮಾರುಕಟ್ಟೆ ಪ್ರದೇಶ ಹಾಗೂ ಪ್ರಮುಖ ರಸ್ತೆಗಳಲ್ಲಿ ತಹಶೀಲ್ದಾರ್‌ ನಂದೀಶ್ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ನಾಗರಾಜನಾಯ್ಕ್, ಪಿಎಸ್‍ಐ ಪ್ರಕಾಶ್ ಹಾಗೂ ಇಲಾಖೆಗಳ ಸಿಬ್ಬಂದಿ ಅಂಗಡಿಗಳಿಗೆ ತೆರಳಿ, ಮಾಸ್ಕ್ ಧರಿಸಿ ವ್ಯವಹಾರ ಮಾಡುವಂತೆ ಎಚ್ಚರಿಕೆ ನೀಡಿ ದಂಡ ವಸೂಲಿ ಮಾಡಿದರು. ಕೆಲ ವ್ಯಾಪಾರಸ್ಥರು, ಗ್ರಾಹಕರು  ಅಧಿಕಾರಿಗಳೊಂದಿಗೆ ವಾಗ್ವಾದ ಕೂಡ  ನಡೆಸಿದರು. 

ದಂಡ ಕಟ್ಟಲು ನಿರಾಕರಿಸಿದ ಅಂಗಡಿಗಳನ್ನು ಬಂದ್ ಮಾಡಲು ಸಿದ್ಧರಾಗಿದ್ದ ಅಧಿಕಾರಿಗಳ ನಡೆಯಿಂದ ಬೆಚ್ಚಿ ಬಿದ್ದ ಮಾಲೀಕರು, ದಂಡ ಕಟ್ಟಲು ಮುಂದಾದರು. ವಾಹನ ಸವಾರರು ಸೇರಿದಂತೆ ಮಾಸ್ಕ್‌ ಧರಿಸದ ಬಹುತೇಕ ಎಲ್ಲರಿಗೂ ಬಿಸಿ ಮುಟ್ಟಿಸಿದರು. 

ತಹಶೀಲ್ದಾರ್ ಎಸ್.ಎಂ. ನಂದೀಶ್ ಮಾತನಾಡಿ, ಶನಿವಾರ, ಭಾನುವಾರ ಸಹ ರಜೆ ಪಡೆಯದೇ ಜನರ ಜೀವ ರಕ್ಷಣೆಗೆ ಕೆಲಸ ಮಾಡುತ್ತಿದ್ದೇವೆ. ಸಾರ್ವ ಜನಿಕರು ಸ್ಪಂದಿಸುತ್ತಿಲ್ಲ. ಎರಡನೇ ಅಲೆಯ ಕೊರೊನಾ ಸರಪಳಿಯನ್ನು ತುಂಡು ಮಾಡಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಅದರ ಬಗ್ಗೆ ಇನ್ನೂ ಅರಿವು ಮೂಡದಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಕೊರೊನಾ ತಡೆಗಟ್ಟಲು ಕಠಿಣ ಕಾನೂನು ಜರುಗಿಸಲು ಮುಂದಾಗುತ್ತೇವೆ ಎಂದರು.

ಮುಖ್ಯಾಧಿಕಾರಿ ನಾಗರಾಜನಾಯ್ಕ್ ಮಾತನಾಡಿ, ಮಾಸ್ಕ್ ಧರಿಸದ ಗ್ರಾಹಕರೊಂದಿಗೆ ವ್ಯಾಪಾರಸ್ಥರು ವ್ಯವಹಾರ ಮಾಡಬಾರದು. ಅಂಗಡಿಗಳಲ್ಲಿ ಅಂತರ ಕಾಪಾಡಿಕೊಂಡು ವ್ಯವಹಾರ ಮಾಡಬೇಕು. ಇಲ್ಲದಿದ್ದರೆ ಅಂಗಡಿ ಪರವಾನಿಗೆಯನ್ನು ರದ್ದುಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಬಿ. ಮಂಜುನಾಥ, ಕಂದಾಯ ಇಲಾಖೆಯ ಅರವಿಂದ, ಪೊಲೀಸ್ ಕೊಟ್ರೇಶ್ ಇನ್ನಿತರರು ಹಾಜರಿದ್ದರು.

error: Content is protected !!