ಆಮೂಲಾಗ್ರ ಬದಲಾವಣೆ ತರುವ ಇಚ್ಛೆ ತಮ್ಮದು

ಹೊನ್ನಾಳಿಯಲ್ಲಿ ನಾಡೋಜ ಡಾ. ಮಹೇಶ್ ಜೋಶಿ

ಹೊನ್ನಾಳಿ, ಏ.18- ತಜ್ಞರ ಸಮಿತಿ ರಚಿಸಿ, ಶತಮಾನದ ಇತಿಹಾಸವಿರುವ  ಕನ್ನಡ ಸಾಹಿತ್ಯ ಪರಿಷತ್‌ ನಲ್ಲಿ ಆಮೂಲಾಗ್ರ ಬದಲಾವಣೆ ತರುವ ಇಚ್ಛೆ ಹೊಂದಿರುವುದಾಗಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಧುರ ಮಧುರವೀ ಮಂಜುಳಗಾನದಿಂದ ದೂರದರ್ಶನದಲ್ಲಿ ಸಮೀಪ ದರ್ಶನವಾಗಿ ಪರಿಷತ್‍ನ ಸದಸ್ಯರಿಗೆ ಚಿರಪರಿಚಿತನಾಗಿರುವೆ. ಗ್ರಾಮೀಣ ಪ್ರತಿಭೆಗಳಿಗೆ ಸಾಹಿತ್ಯ ಪರಿಷತ್ತಿನಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು. ಪರಿ ಷತ್ತಿನ ಚಟುವಟಿಕೆಗಳನ್ನು ಗ್ರಾಮೀಣ ಭಾಗಗ ಳಿಗೂ ವಿಸ್ತರಿಸುವುದು ಅತ್ಯಂತ ಜರೂರಾಗಿ ಆಗಬೇಕಿದೆ. ಅದನ್ನು ಅನುಷ್ಠಾನಗೊಳಿಸಲು ತಾವು ಶ್ರಮಿಸುವುದಾಗಿ ಭರವಸೆ ನೀಡಿದರು.

ಕನ್ನಡ ನಮ್ಮ ಭಾಷೆ ಎಂಬ ಅಭಿಮಾನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಆಡಳಿತ ಭಾಷೆಯನ್ನಾಗಿ ಕನ್ನಡವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸುವುದಕ್ಕೂ ಮೊದಲು ಕನ್ನಡ ಸಾಹಿತ್ಯ ಪರಿಷತ್ತಿನಿಂದಲೇ ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸುವ ಕೆಲಸ ಆಮೂಲಾಗ್ರವಾಗಿ ಆಗಬೇಕು. ಆ ನಿಟ್ಟಿನಲ್ಲಿ ತಾವು ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು. 

ಎಲ್ಲರೂ ಕನ್ನಡದಲ್ಲಿಯೇ ತಮ್ಮ ಸಹಿಯನ್ನು ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ನಿತ್ಯದ ವ್ಯವಹಾರದಲ್ಲಿ ಕನ್ನಡದ ಅಂಕಿಗಳನ್ನೇ ಬಳಸಬೇಕು. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳು ಕನ್ನಡ ಭಾಷೆಯನ್ನೇ ಬಳಸ ಬೇಕು. ರಾಜ್ಯದ ಎಲ್ಲಾ ಕಡೆ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿಯೇ ಬರೆಸಲು ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ಕನ್ನಡ ಅನ್ನ ನೀಡುವ ಭಾಷೆಯಾಗಬೇಕು. ಎಲ್ಲೆಡೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಲಭಿಸಬೇಕು. ಕೇವಲ ಸರ್ಕಾರಿ ನೌಕರಿಗಳಷ್ಟೇ ಅಲ್ಲ, ಖಾಸಗಿ ರಂಗ ಸೇರಿದಂತೆ ಎಲ್ಲಾ ಕಡೆ ಕನ್ನಡಿಗರಿಗೆ ಔದ್ಯೋಗಿಕ ಅವಕಾಶಗಳು ದೊರೆಯಬೇಕು. ಇದಕ್ಕಾಗಿ ಕಸಾಪ ವತಿಯಿಂದ ವಿನೂತನ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ತಾವು ಕಸಾಪ ರಾಜ್ಯಾಧ್ಯಕ್ಷರಾದರೆ ಕನ್ನಡ ಶಾಲೆಗಳು ಮುಚ್ಚಲು ಅವಕಾಶ ನೀಡುವುದಿಲ್ಲ. ಈಗಾಗಲೇ ಮುಚ್ಚಿರುವ ಶಾಲೆಗಳ ಪುನರಾರಂಭಕ್ಕೆ ಕ್ರಮ ಜರುಗಿಸುತ್ತೇನೆ. ಎಲ್ಲಾ ತಾಲ್ಲೂಕುಗಳಲ್ಲೂ ಕನ್ನಡ ಭವನಗಳ ನಿರ್ಮಾಣಕ್ಕೆ ಪ್ರಯತ್ನಿಸುತ್ತೇನೆ. ಸಾಹಿತ್ಯ ಹಾಗೂ ಸಂಸ್ಕೃತಿಗಳು ಒಟ್ಟಿಗೆ ಹೋಗಬೇಕಾಗಿದೆ. ಅಂತಹ ವಾತಾವರಣ ನಿರ್ಮಿಸಲು ಪ್ರಯತ್ನಿಸುವುದಾಗಿ ಡಾ. ಮಹೇಶ್ ಜೋಶಿ ಭರವಸೆ ನೀಡಿದರು.

ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾ|| ಅರಳಿ ನಾಗರಾಜ್ ಮಾತನಾಡಿದರು. ಪ್ರಚಾರ ಸಮಿತಿ ಸಂಘಟನಾ ಕಾರ್ಯದರ್ಶಿ ನಬೀಸಾಬ್ ಕುಷ್ಟಗಿ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್. ರೇವಣಪ್ಪ, ಎಂಪಿಎಂ ಷಣ್ಮುಖಯ್ಯ, ಕರಿಬಸಪ್ಪ, ರಾಮು, ಚಂದ್ರಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!