ಹರಿಹರದ ಶಾಸಕರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ
ಹರಿಹರ, ಫೆ.12- ಇತ್ತೀಚೆಗೆ ನಡೆದ ಗಂಭೀರ ಬೆಳವಣಿಗೆಗಳು ದೇಶದ ವೈದ್ಯಕೀಯ ಭ್ರಾತೃತ್ವವನ್ನು ಕಂಗೆಡಿಸಿವೆ. ಸಿ.ಸಿ.ಐ.ಎಂ. (ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸನ್) ನ ಇತ್ತೀಚಿನ ಆದೇಶದಲ್ಲಿ ಶಲ್ಯತಂತ್ರದ ಆಯುರ್ವೇದ ಸ್ನಾತಕೋತ್ತರ ಕೋರ್ಸ್ಗಳಿಗೆ ಎಂಎಸ್ (ಜನರಲ್ ಸರ್ಜರಿ) ಎಂಬ ನಾಮಾಂಕಿತವನ್ನು ನೀಡಿರುವುದನ್ನು ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಶಾಖೆ ತೀವ್ರವಾಗಿ ಖಂಡಿಸಿದೆ.
ಸಿಸಿಐಎಂ ತನ್ನ ವಿದ್ಯಾರ್ಥಿಗಳಿಗೆ ಆಧುನಿಕ ಔಷಧ ಶಸ್ತ್ರಚಿಕಿತ್ಸೆಯನ್ನು ಮತ್ತು ಸ್ವತಂತ್ರವಾಗಿ ಅಭ್ಯಾಸ ಮಾಡಲು ಅವಕಾಶ ನೀಡಿರುವುದನ್ನು ಖಂಡಿಸಿ, ಹರಿಹರ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರು ಶಾಸಕ ಎಸ್. ರಾಮಪ್ಪ ಅವರ ಮೂಲಕ ಪ್ರಧಾನಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಆಯುರ್ವೇದ ವೈದ್ಯರು ಮಾಡಬಹುದಾದ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ಪಟ್ಟಿಯನ್ನೂ ಸಹ ಪ್ರಕಟಿಸುವುದರೊಂದಿಗೆ ಒತ್ತುವರಿಯನ್ನು ಸಂಪೂರ್ಣಗೊಳಿಸಲಾಗಿದೆ. ಅವೈಜ್ಞಾನಿಕವಾಗಿ ಎಲ್ಲ ವೈದ್ಯ ಪದ್ಧತಿಗಳನ್ನು ಮಿಶ್ರಗೊಳಿಸುವ ಈ ಹಿಮ್ಮುಖ ಹೆಜ್ಜೆಯು ಆಧುನಿಕ ವೈದ್ಯಕೀಯ ವೈದ್ಯರಿಗೆ ಯಾವ ರೀತಿಯಿಂದಲೂ ಸಮನಾಗದ `ಹೈಬ್ರಿಡ್’ ವೈದ್ಯರನ್ನು ನಿರ್ಮಿಸುತ್ತದೆ. ಎನ್.ಎಂ.ಸಿ. ಕಾಯ್ದೆಯ ಸೆಕ್ಷನ್ 32ರ ಪ್ರಕಾರ ವೈದ್ಯಕೀಯೇತರರಿಗೆ ಸಮುದಾಯ ಆರೋಗ್ಯ ರಕ್ಷಕರ ಹೆಸರಿನಲ್ಲಿ ಸ್ವತಂತ್ರವಾಗಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲು ಅವಕಾಶ ಕಲ್ಪಿಸಿ, ನಕಲಿ ವೈದ್ಯರ ಸೃಷ್ಟಿಗೆ ಕಾರಣವಾಗುತ್ತದೆ ಎಂದು ದೂರಿದ್ದಾರೆ.
ಎನ್. ಎಂ.ಸಿ. ಕಾಯ್ದೆಯ ಸೆಕ್ಷನ್ 50ರ ಪ್ರಕಾರ ಎಲ್ಲ ಔಷಧಗಳ ಪಠ್ಯಕ್ರಮವನ್ನು ಮಿಶ್ರ ಮಾಡಿ ಮಿಶ್ರ ವೈದ್ಯಕೀಯ ಮಾಡಲು ಅವಕಾಶ ಕಲ್ಪಿಸುತ್ತದೆ. ಎನ್ ಎಂಸಿ ಕಾಯ್ದೆಯ ಸೆಕ್ಷನ್ 51 ರ ಪ್ರಕಾರ, ಬ್ರಿಜ್ ಕೋರ್ಸ್ಗಳಿಗೆ ಅನುಮತಿ ನೀಡಿ ಅಡ್ಡ ಸೇವೆಗಳಿಗೆ ಕಾರಣವಾಗುತ್ತದೆ. ಈ ಎಲ್ಲ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡರೆ ಸಾರ್ವಜನಿಕ ಆರೋಗ್ಯದ ಸುರಕ್ಷತೆಗೆ ಧಕ್ಕೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಐಎಂಎ ಯ ಪ್ರಬಲ ಬೇಡಿಕೆಗಳೆಂದರೆ, ಮಿಶ್ರ ವೈದ್ಯಕೀಯ (ಮಿಕ್ಸೊ ಪತಿ) ಖಂಡಿತಾ ಬೇಡ. ಎಲ್ಲಾ ವಿವಿಧ ವೈದ್ಯ ಪದ್ಧತಿಗಳ ಶುದ್ಧಿಯೇ ಐ.ಎಮ್.ಎ. ಗುರಿ. ಪ್ರತಿಯೊಂದು ಔಷಧ ಪದ್ಧತಿಯ ವೈದ್ಯರೂ ಬೇರೆ ಬೇರೆಯಾಗಿ ಗುರುತಿಸಲ್ಪಡಬೇಕು. ಅಲೋಪತಿಗಾಗಿ ಡಾ., ಆಯುರ್ವೇದಕ್ಕೆ `ವೈದ್ಯ’ ಮತ್ತು ಯುನಾನಿಗಾಗಿ `ಹಕೀಮ್’, ಹೋಮಿಯೋಪತಿಗಾಗಿ `ಹೋಮಿಯೋ’ ಮುಂತಾದ ನಿರ್ದಿಷ್ಟ ಪೂರ್ವ ಪ್ರತ್ಯಯಗಳನ್ನು ಬಳಸಿ ಸಾರ್ವಜನಿಕರಿಂದ ಸುಲಭವಾಗಿ ಗುರುತಿಸಲ್ಪಡಬೇಕು. ಸಂಶೋಧನೆ ಮತ್ತು ಬೆಳವಣಿಗೆಗಳು ಆಯಾ ವೈದ್ಯಕೀಯ ಕ್ಷೇತ್ರಗಳಲ್ಲಿ ನಡೆಯಬೇಕು ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ವೈದ್ಯಕೀಯ ಪದ್ಧತಿಯನ್ನು ಅನುಸರಿಸಬೇಕು.
ಈ ಹಿಂದೆ ಮಾಡಿದ್ದ ಮನವಿಗಳಿಗೆ ಸರಕಾರ ಗಳು ಸ್ಪಂದಿಸದೇ ಇರುವುದರಿಂದ ಭಾರತೀಯ ವೈದ್ಯಕೀಯ ಸಂಘವು ಫೆಬ್ರುವರಿ 1ರಿಂದಲೇ ಇಡೀ ದೇಶಾದ್ಯಂತ ಸರಣಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ನಾಡಿದ್ದು ದಿನಾಂಕ 14 ರವರೆಗೆ ನಡೆಯಲಿದೆ. ಇದರ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯು ಬೆಂಗಳೂರಿನ ಐ.ಎಂ.ಎ. ಕೇಂದ್ರ ಕಛೇರಿಯ ಆವರಣದಲ್ಲಿ ಈ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದೆ.
ಸಾರ್ವಜನಿಕ ಹಿತಾಸಕ್ತಿ ಮತ್ತು ಇತರೆ ವೈದ್ಯಕೀಯ ವ್ಯವಸ್ಥೆಯ ಹಿತದೃಷ್ಟಿಯಿಂದ ಭಾರತ ಸರಕಾರದ ಆದೇಶವನ್ನು ರದ್ದುಪಡಿಸಬೇಕು. ಅಥವಾ ಮಾರ್ಪಡಿಸಬೇಕೆಂದು ಸಂಘ ಒತ್ತಾಯಿಸಿ ಮನವಿ ಸಲ್ಲಿಸಿತು. ಮನವಿ ಸ್ವೀಕರಿಸಿದ ಶಾಸಕ ಎಸ್. ರಾಮಪ್ಪ, ಮನವಿಯನ್ನು ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮೂಲಕ ಪ್ರಧಾನಮಂತ್ರಿಗಳಿಗೆ ತಲುಪಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹರಿಹರ ಐಎಂಎ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ಜಯಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಡಾ.ಎ. ಗೋಪಿ, ಖಜಾಂಚಿ ಡಾ. ಖಮಿತ್ಕರ್, ಡಾ. ಸಚಿನ್ ಬೋಂಗಾಳೆ, ಡಾ. ಶಾರದಾದೇವಿ, ಡಾ. ರಶ್ಮಿ ಇನ್ನಿತರರಿದ್ದರು.