ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಾಸ್ಟೆಲ್‌ಗೆ ಮನವಿ

ಹರಪನಹಳ್ಳಿಯಲ್ಲಿ ಎ.ಐ.ಎಸ್.ಎಫ್. ಪ್ರತಿಭಟನೆ

ಹರಪನಹಳ್ಳಿ, ಫೆ.12- ಹಾಸ್ಟೆಲ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕು ಹಾಗೂ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ  ಪ್ರತಿಭಟನೆ  ನಡೆಸಿ, ಬಿಸಿಎಂ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಅಖಿಲ ಭಾರತ ವಿದ್ಯಾರ್ಥಿ ಫೆಡರೇ ಷನ್ ರಾಜ್ಯ ಕಾರ್ಯದರ್ಶಿ  ರಮೇಶ್‍ ನಾಯ್ಕ ಮಾತನಾಡಿ, ಕೋವಿಡ್ 19 ರಿಂದ ಶೈಕ್ಷಣಿಕ ವರ್ಷ ತಡವಾಗಿ ಆರಂಭಗೊಂಡಿದ್ದು, ತಾಲ್ಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುತ್ತಿದ್ದಾರೆ. ತಾಲ್ಲೂಕು ಶೈಕ್ಷಣಿಕ ರಂಗದಲ್ಲಿ ಹೆಸರು ಮಾಡುತ್ತಿದ್ದರೂ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸೌಲಭ್ಯ ಇಲ್ಲ.

 ಕೆಲವು ಹಳ್ಳಿಗಳಿಗೆ ಸಾರಿಗೆ ಸಂಪರ್ಕದ ವ್ಯವಸ್ಥೆ ಇಲ್ಲ. ಹಾಗಾಗಿ ಬಡತನದಲ್ಲೂ ವಿದ್ಯಾಭ್ಯಾಸದ ಕನಸನ್ನು ಕಂಡ ಬಹಳಷ್ಟು ವಿದ್ಯಾರ್ಥಿಗಳಿಗೆ ಬಿ.ಸಿ.ಎಂ ಮತ್ತು ಎಸ್ಸಿ-ಎಸ್ಟಿ ಇಲಾಖೆಯಿಂದ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶವನ್ನು ಕಲ್ಪಿಸಿಕೊಡ ಬೇಕು. ಮತ್ತು ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಕರ್ಯವನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಗುಡಿಹಳ್ಳಿ ಹಾಲೇಶ್ ಮಾತನಾಡಿ,  ಈಗಿನ ಸರ್ಕಾರದ ನಡೆ ಯನ್ನು ಗಮನಿಸಿದಾಗ ವಿದ್ಯಾರ್ಥಿಗಳಿಂದ ವಿದ್ಯಾಭ್ಯಾಸದ ಹಾಗೂ ಹಾಸ್ಟೆಲ್‌ನಿಂದ ದೊರಕುವ ವಸತಿ ಮತ್ತು ಆಹಾರ ಭದ್ರತೆ ಯನ್ನೂ ಸಹ ಕಸಿದುಕೊಳ್ಳುವ ಹುನ್ನಾರಗಳು ನಡೆಯುತ್ತಿವೆ. ಇದಕ್ಕೆ ಉದಾಹರಣೆಯಾಗಿ ಎಸ್ಸಿ, ಎಸ್ಟಿ ಇಲಾಖೆಯಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇತ್ತು. ಆದರೆ ಈಗ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಕ್ಕಾಗಿ ಶೇ.75 ಮಾತ್ರ ತೆಗೆದುಕೊಳ್ಳಬೇಕು ಎಂದಾಗಿದೆ.

 ಈ ನಡೆಯನ್ನು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಖಂಡಿಸುತ್ತದೆ. ಕೂಡಲೇ ಈ ನಿರ್ಣಯವನ್ನು ಕೈಬಿಟ್ಟು ಅರ್ಜಿ ಸಲ್ಲಿಸಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಕರ್ಯ ಕಲ್ಪಿಸಬೇಕು  ಎಂದು ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷ ಚಂದ್ರನಾಯ್ಕ, ರಾಜ್ಯ ಜಂಟಿ ಕಾರ್ಯದರ್ಶಿ ಬಳಗನೂರು ಕೊಟ್ರೇಶ್, ತಾಲ್ಲೂಕು ಮುಖಂಡ ಕೆರೆಗುಡಿ ಹಳ್ಳಿ ಅರುಣ್‍ಕುಮಾರ್, ತೇಜಸ್ವಿನಿ, ಸಿ.ಕೆ. ರಾಧಿಕ, ಎಂ. ಚೈತ್ರ, ಟಿ. ರಾಧ, ಎಸ್. ರಕ್ಷಿತ, ಇ. ರೇಖಾ, ವಿ. ಮಮತ ಆಕಾಶ್, ಪಿ. ಹೇಮಲತಾ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!