ದಾವಣಗೆರೆ, ಫೆ.13- 394ನೇ ವರ್ಷದ ಶಿವಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ಅಂಗವಾಗಿ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ವಿವಿಧ ಕ್ರೀಡಾ ಹಾಗೂ ಯೋಗಾಸನ ಸ್ಪರ್ಧೆಗಳನ್ನು ಇಂದಿಲ್ಲಿ ನಡೆಸುವುದರೊಂದಿಗೆ ಪ್ರತಿಭೆಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಿ ಗುರುತಿಸುವ ಕಾರ್ಯದ ಮುಖೇನ ಶಿವಾಜಿ ಮಹಾರಾಜ್ ಅವರ ಜಯಂತಿಯನ್ನು ಅರ್ಥಪೂರ್ಣ ಮತ್ತು ನೆನಪುಳಿಯುವಂತೆ ಆಚರಿಸಲಾಯಿತು.
ಯೋಗಾಸನ ಚಾಂಪಿಯನ್ ಶಿಪ್: ಕ್ಷತ್ರಿಯ ಮರಾಠ ವಿದ್ಯಾವರ್ಧಕ ಯುವ ಸಂಘ, ಜೀಜಾಮಾತಾ ಮಹಿಳಾ ಮಂಡಳಿ ಹಾಗೂ ಎಸ್.ಎ.ಎಸ್.ಎಸ್ ಯೋಗ ಫೆಡರೇ ಷನ್, ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶ್ರೀ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಶಿವ ಛತ್ರಪತಿ ಶಿವಾಜಿ ಮಹಾರಾಜ್ ಜಿಲ್ಲಾ ಯೋಗಾಸನ ಚಾಂಪಿಯನ್ ಶಿಪ್-2021 ನಡೆಸಲಾಯಿತು.
ಈ ಯೋಗಾಸನ ಚಾಂಪಿಯನ್ ಶಿಪ್ ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಕ್ಕಳೇ ಸಮಾಜದ ಆಸ್ತಿಯಾಗಿದ್ದು, ಉನ್ನತ ಮಟ್ಟದಲ್ಲಿ ಅವರನ್ನು ಬೆಳೆಸುವ ಕೆಲಸ ಮಾಡಬೇಕು. ಸಾಧಕರಾಗಿ ಹೊರಹೊಮ್ಮಲು ಪ್ರೋತ್ಸಾಹ ನೀಡಬೇಕೆಂದು ಆಶಿಸಿದರು.
ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾಲತೇಶ್ ರಾವ್ ಡಿ. ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಯಶ ವಂತರಾವ್ ಜಾಧವ್, ಉಪಾಧ್ಯಕ್ಷ ಅಜ್ಜಪ್ಪ ಪವಾರ್, ಹೊದಿಗೆರೆಯ ಶಹಜಿರಾಜೇ ಬೋಸ್ಲೆ ಸ್ಮಾರಕ ಭವನದ ಅಧ್ಯಕ್ಷ ವೈ. ಮಲ್ಲೇಶ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆರ್.ಜಿ. ಸತ್ಯನಾರಾಯಣ ರಾವ್, ಕೆ.ಎನ್. ಮಂಜೋಜಿರಾವ್ ಗಾಯಕ್ ವಾಡ್, ವಕೀಲ ರಾಘವೇಂದ್ರ, ಎಸ್.ಎ.ಎಸ್.ಎಸ್ ಯೋಗ ಫೆಡರೇಷನ್ ಅಧ್ಯಕ್ಷ ಎಂ. ರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಪರಶುರಾಮ್, ಉಪಾಧ್ಯಕ್ಷ ಎಂ.ಎನ್. ಗೋಪಾಲ ರಾವ್, ಅಂತರಾಷ್ಟ್ರೀಯ ಯೋಗಪಟು ನಾಗರಾಜ್ ಕೆ. ಕುರ್ಡೇಕರ್, ಅಂತರರಾಷ್ಟ್ರೀಯ ತೀರ್ಪುಗಾರ ಸುನೀಲ್ ಕುಮಾರ್, ಗುರುಕುಲ ಯೋಗಾ ಕೇಂದ್ರದ ಅನೀಲ್ ಕುಮಾರ್ ರಾಯ್ಕರ್, ಪರಮಾನಂದ ಯೋಗ ಕೇಂದ್ರದ ತೀರ್ಥರಾಜ್ ಹೋಲೂರು ಸೇರಿದಂತೆ ಇತರರು ಇದ್ದರು.
ಮೇಯರ್ ಬಿ.ಜಿ. ಅಜಯ್ ಕುಮಾರ್ ಸಹ ಯೋಗಾಸನ ಚಾಂಪಿಯನ್ ಶಿಪ್ ಕಾರ್ಯಕ್ರಮಕ್ಕೆ ಆಗಮಿಸಿ ಯೋಗಪಟುಗಳಿಗೆ ಶುಭ ಹಾರೈಸಿದರು.ಯೋಗ ಚಾಂಪಿಯನ್ ಶಿಪ್ ಗೆ ಹರಿಹರ ಮತ್ತು ದಾವಣಗೆರೆಯಿಂದ ಸುಮಾರು 59 ಮಂದಿ ಭಾಗವಹಿಸಿದ್ದರು. ದಾವಣಗೆರೆಯ ಮಲ್ಲಿಕಾರ್ಜುನ್ ಎನ್. ಮಳಗಿ ಮತ್ತು ಹರಿಹರದ ಸ್ಪೂರ್ತಿ ಚಾಂಪಿಯನ್ ಶಿಪ್ ಗೆ ಭಾಜನರಾಗಿದ್ದಾರೆ ಎಂದು ರಾಷ್ಟ್ರೀಯ ಯೋಗಪಟು ರಾಘವೇಂದ್ರ ಎಂ. ಚೌವ್ಹಾಣ್ ತಿಳಿಸಿದ್ದಾರೆ.
ಬ್ಯಾಟ್ ಬೀಸಿದ ಜಿಲ್ಲಾಧಿಕಾರಿ: ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ ನಲ್ಲಿರುವ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಸಾಮ್ರಾಟ್ ಛತ್ರಪತಿ ಕಪ್ -2021 ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬ್ಯಾಟಿಂಗ್ ಮಾಡುವ ಮುಖೇನ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಲು ಜರೇಕಟ್ಟೆ, ಕಣವೆಬಿಳಚಿ, ದಾವಣಗೆರೆ ಸೇರಿದಂತೆ ಒಟ್ಟು 12 ತಂಡಗಳು ಆಗಮಿಸಿವೆ ಎಂದು ರಾಣೋಜಿರಾವ್ ಮಾಹಿತಿ ನೀಡಿದ್ದಾರೆ.
ಪ್ರಬಂಧ ಸ್ಪರ್ಧೆ : ಜೀಜಾಮಾತಾ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಗೆ 5ರಿಂದ 9ನೇ ತರಗತಿಯ 35 ಮಕ್ಕಳು ಹಾಗೂ ಮೋತಿವೀರಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಬಂಧ ಸ್ಪರ್ಧೆಗೆ ಮೊದಲ ಮತ್ತು ದ್ವಿತೀಯ ಪಿಯುಸಿಯ 60 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಚೇತನಾ ಶಿವಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಅನಿತಾ ಮಾಲತೇಶ್ ರಾವ್ ಜಾಧವ್, ಜೀಜಾಮಾತಾ ಮಹಿಳಾ ಮಂಡಳಿಯ ಗೌರಾಬಾಯಿ, ಅನುಸೂಯ ಬಾಯಿ, ಗೋಪಾಲ್ ರಾವ್ ಮಾನೆ, ನಾಗರತ್ನ ಕಾಟೆ, ಭಾಗ್ಯ ಪಿಸಾಳೆ, ಭವಾನಿ, ಸೌಂದರ್ಯ, ಸೌಮ್ಯ ಜಾಧವ್, ಸಂಘದ ಸದಸ್ಯ ಪರಶುರಾಮ್, ಮೋತಿವೀರಪ್ಪ ಕಾಲೇಜಿನ ಪ್ರಾಂಶುಪಾಲ ಷಡಕ್ಷರಪ್ಪ, ಉಪನ್ಯಾಸಕರುಗಳಾದ ಮಂ ಜುಳಾ, ನಾಗರಾಜ್ ಸೇರಿದಂತೆ ಇತರರಿದ್ದರು.