ಎಂ.ಎಂ. ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪೌರ ಶಿಕ್ಷಣ ಶಿಬಿರ ಸಮಾರೋಪ ಸಮಾರಂಭದಲ್ಲಿ ಡಯಟ್ ಪ್ರಾಚಾರ್ಯ ಹೆಚ್.ಕೆ. ಲಿಂಗರಾಜು ಅಭಿಮತ
ದಾವಣಗೆರೆ, ಫೆ. 13- ಉತ್ತಮ ಪ್ರಜೆಗಳನ್ನು ರೂಪಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಅಂತಹ ಶಿಕ್ಷಕರನ್ನು ರೂಪಿಸುವಲ್ಲಿ ಬಿಎಡ್ ಕಾಲೇಜುಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯ ಪ್ರಾಚಾರ್ಯರೂ, ಪದನಿಮಿತ್ತ ಉಪ ನಿರ್ದೇಶಕರೂ ಆದ ಹೆಚ್.ಕೆ. ಲಿಂಗರಾಜು ಹೇಳಿದರು.
ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪೌರ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.
ಶಿಕ್ಷಣ ತರಬೇತಿ ಸಂಸ್ಥೆಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನೊಳಗೊಂಡ ವಿಶಿಷ್ಟ ರೂಪುರೇಷೆಗಳಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ಹೇಳಿಕೊಡುವ ಜೊತೆಗೆ, ಸಮಾಜದಲ್ಲಿ ಬೆರೆಯುವ, ಗುರುತಿಸಿಕೊಳ್ಳುವ ಬಗೆಯನ್ನೂ ತಿಳಿಸಿಕೊಡುತ್ತೇವೆ. ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಿವೆ ಎಂದು ಹೇಳಿದರು.
ಶ್ರೀ ತರಳಬಾಳು ಜಗದ್ಗುರು ಲಿಂ.ಶ್ರೀ ಗುರುಶಾಂತರಾಜ ದೇಶೀಕೇಂದ್ರ ಮಹಾಸ್ವಾಮಿಗಳವರ ಸಂಸ್ಮರಣಾರ್ಥ 2018-19ನೇ ಬಿ.ಇಡಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕು. ಹೆಚ್.ಆರ್. ಆಯಿಷಾ ಸಿದ್ದಿಕಾ ಹಾಗೂ ಹಿರಿಯ ಶ್ರೀ ತರಳಬಾಳು ಜಗದ್ಗುರು ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಸ್ಮರಣಾರ್ಥ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕು.ಡಿ.ಎಲ್. ರೂಪಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟ ಕಾಲೇಜು ಪ್ರಾಚಾರ್ಯ ಡಾ.ಟಿ.ಕೆ. ನಾಗರಾಜ ನಾಯ್ಕ ಅವರು, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಹತ್ತು ರಾಂಕುಗಳ ಪೈಕಿ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯಕ್ಕೆ 6 ರಾಂಕುಗಳು ಬಂದಿರುವುದು ಸಂತಸ ವಿಚಾರ ಎಂದರು.
ಪ್ರತಿಭಾ ಪುರಸ್ಕಾರ ಪಡೆದ ಕು.ಹೆಚ್.ಆರ್. ಆಯಿಷಾ ಸಿದ್ದಿಕಿ ಮಾತನಾಡಿ, ಕಾಲೇಜು ಸೇರಿದ ದಿನದಿಂದಲೇ ರಾಂಕ್ ಪಡೆಯುವ ಗುರಿ ಇಟ್ಟುಕೊಂಡಿದ್ದೆ. ಆರಂಭಿಕ ಎರಡು ಸೆಮಿಸ್ಟರ್‌ಗಳಲ್ಲಿ ಅಂಕಗಳು ಕಡಿಮೆಯಾದವು. ಆದರೆ ಶಿಕ್ಷಕರ ಪ್ರೋತ್ಸಾಹ, ಉತ್ತೇಜನ ಪೂರ್ವಕ ನುಡಿಗಳಿಂದ ಉಳಿದೆಲ್ಲಾ ಸೆಮಿಸ್ಟರ್‌ಗಳಲ್ಲಿ ಉತ್ತಮ ಅಂಕ ಪಡೆದು ರಾಂಕ್ ಪಡೆಯಲು ಸಾಧ್ಯವಾಯಿತು ಎಂದರು.
ಆರಂಭದ ದಿನಗಳಲ್ಲಿ ಓದಿನಲ್ಲಿ ತುಸು ಹಿನ್ನಡೆಯಾದರೂ, ನಮ್ಮ ಗುರಿ ನಿಶ್ಚಲವಾಗಿರಬೇಕು. ಸತತ ಪ್ರಯತ್ನ, ಕಠಿಣ ಪರಿಶ್ರಮ ಹೆಚ್ಚು ಅಂಕಗಳಿಗೆ ಸಹಕಾರಿ ಎಂದು ಹೇಳಿದರು.
ಮತ್ತೋರ್ವ ಪ್ರತಿಭಾ ಪುರಸ್ಕೃತೆ ಕು.ಡಿ.ಆಲ್. ರೂಪ ಮಾತನಾಡಿ,` ಸಹನೆ ನಮ್ಮದಾದರೆ ಸಕಲವೂ ನಮ್ಮದೆ’ ಎನ್ನುವಂತೆ ಬಿಎಡ್ ವಿದ್ಯಾರ್ಥಿಗಳಿಗೆ ಸಹನೆ ಇರಬೇಕು. ಎರಡು ವರ್ಷಗಳ ಶಿಕ್ಷಣದಲ್ಲಿ ಸಮಸ್ಯೆಗಳು ಎದುರಾದರೆ, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವಂತಹ ನಿರ್ಧಾರ ತೆಗೆದುಕೊಳ್ಳದೆ ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದರು.
ಪ್ರಶಸ್ತಿಯ ಮೊತ್ತಕ್ಕಿಂತ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದು ಶ್ಲ್ಯಾಘನೀಯ. ನೂತನ ವಿದ್ಯಾರ್ಥಿಗಳಿಗೆ ಪ್ರೇರಣೆಯ ಕಾರ್ಯಕ್ರಮ ಇದಾಗಿದೆ. ಇಂದು ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳಾದ ಎಂ.ಹನುಮಂತಪ್ಪ, ಬಿ.ಭವ್ಯಶ್ರೀ ಶಿಬಿರದ ಅನುಭವ ಹಂಚಿಕೊಂಡರು. ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಹೆಚ್.ವಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ವಿಶೇಷಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಕು. ಸುಮಾ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಹಾಲೇಶಪ್ಪ ಟಿ, ಸ್ವಾಗತಿಸಿದರು. ಕು.ಡಿ.ಬಿ. ಪೂಜಾ ನಿರೂಪಿಸಿದರೆ, ಸಹಾಯಕ ಪ್ರಾಧ್ಯಾಪ ಕರಾದ ಜಿ.ಎಂ. ಶಶಿಕಲಾ ವಂದಿಸಿದರು.