ಸಂಚಾರ ನಿಯಮಗಳನ್ನು ಪಾಲಿಸುವಂತೆ ಜನಜಾಗೃತಿ

ದಾವಣಗೆರೆ, ಫೆ.13- ದಾವಣಗೆರೆ ದಕ್ಷಿಣ ಮತ್ತು ಉತ್ತರ ಸಂಚಾರ ಪೊಲೀಸ್ ಠಾಣೆಗಳ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದಲ್ಲಿಂದು ಸಂಜೆ ಸಂಚಾರ ನಿಯಮ ಉಲ್ಲಂಘನೆಯಿಂದಾಗುವ ರಸ್ತೆ ಅಪಘಾತಗಳು, ಸಂಚಾರ ನಿಯಮ ಪಾಲಿಸುವುದರಿಂದ ಅಪಘಾತಗಳಿಂದ ದೂರ ಉಳಿಯುವ ಜೊತೆಗೆ ಜೀವ ರಕ್ಷಣೆಯ ಕುರಿತಾಗಿ ಜನ ಜಾಗೃತಿ ಮೂಡಿಸಲಾಯಿತು.

ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿ, ನೆನಪಿಡಿ ನಿಮ್ಮ ಕುಟುಂಬಕ್ಕೆ ನಿಮ್ಮ ಅಗತ್ಯವಿದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ವಾಹನ ಚಲಿಸುವಾಗ ಮೊಬೈಲ್ ಬಳಕೆ ಬೇಡ, ಶಿರಸ್ತ್ರಾಣ ಇಲ್ಲದ ಪಯಣ ದಂಡಕ್ಕೆ ಆಹ್ವಾನ, ಅವಸರವೇ ಅಪಘಾತ, ನಿಧಾನವೇ ಪ್ರಧಾನ, ಅತಿ ವೇಗ ತಿಥಿ ಬೇಗ, ನಮ್ಮ ಸುರಕ್ಷತೆ ನಮ್ಮ ನಮ್ಮ ಜವಾಬ್ದಾರಿ ಹೀಗೆ ಸಂಚಾರ ನಿಯಮ ಉಲ್ಲಂಘನೆಯಿಂದಾಗುವ ಅನಾಹುತಗಳು ಹಾಗೂ ನಿಯಮ ಪಾಲಿಸಿದರೆ ಜೀವ ರಕ್ಷಿಸಿಕೊಳ್ಳುವ ಸಂದೇಶವುಳ್ಳ ಬೃಹತ್ ನಾಮಫಲಕಗಳನ್ನು ಜಯದೇವ ವೃತ್ತದಲ್ಲಿ ಪ್ರದರ್ಶಿಸುತ್ತಾ ಜನರನ್ನು ಸೆಳೆದು ಜಾಗೃತಿ ಮೂಡಿಸಲಾಯಿತು.

ಜನಜಾಗೃತಿಯ ನೇತೃತ್ವ ವಹಿಸಿದ್ದ ನಗರ ಡಿವೈಎಸ್ಪಿ ನಾಗೇಶ್ ಐತಾಳ್ ಮಾತನಾಡಿ, ಈ ತಿಂಗಳು ಪೂರ್ತಿ ರಸ್ತೆ ಸುರಕ್ಷತಾ ಸಪ್ತಾಹ ನಡೆಯಲಿದ್ದು, ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಶಾಲಾ – ಕಾಲೇಜು, ಬಸ್‌ ನಿಲ್ದಾಣ, ಆಟೋ ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಪಾರ್ಕಿಂಗ್ ಅಲ್ಲದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಬಾರದು ಎಂದು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. 

ಈಗಾಗಲೇ ಬೈಕ್, ಸೈಕಲ್, ಆಟೋಗಳಲ್ಲಿ ಜಾಥಾ ನಡೆಸಲಿದ್ದು, ಜೀವ ಮುಖ್ಯ, ಹೆಲ್ಮೆಟ್ ಮುಖ್ಯ, ಮೊಬೈಲ್ ಕವರ್ ಖರೀದಿಸುವವರು ಹೆಲ್ಮೆಟ್ ಧರಿಸಿ ಎಂದರೆ ಕೇಳುವುದಿಲ್ಲ. ಹೆಲ್ಮೆಟ್ ಧರಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಚಾರ ವೃತ್ತ ಸಿಪಿಐ ಎನ್. ತಿಮ್ಮಣ್ಣ, ದಕ್ಷಿಣ ಸಂಚಾರ ಪಿಎಸ್ ಐಗಳಾದ ಕೆ. ಶ್ರೀಧರ್, ಜಯಶೀಲಾ, ಉತ್ತರ ಸಂಚಾರಿ ಠಾಣೆಯ ಇಮ್ರಾನ್, ಸತೀಶ್ ಬಾಬು ಸೇರಿದಂತೆ ಇತರರು ಇದ್ದರು.

error: Content is protected !!