ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಕಾಯ್ದೆ ಜಾರಿಗೆ ವಿರೋಧಿಸಿ ಮಾಯಕೊಂಡದಲ್ಲಿ ಕಾಂಗ್ರೆಸ್‍ನಿಂದ ಪ್ರತಿಭಟನೆ
ದಾವಣಗೆರೆ,ಫೆ.13- ಪೆಟ್ರೋಲ್ ಮತ್ತು ಡಿಜೇಲ್ ಬೆಲೆ ಏರಿಕೆಯಿಂದಾಗಿ ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿದ್ದು, ಈ ಕೂಡಲೇ ಪೆಟ್ರೋಲ್ ಮತ್ತು ಡಿಜೇಲ್ ಬೆಲೆಯನ್ನು ಇಳಿಸಿ ಜನತೆಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರಿಂದಲೇ ಸರ್ಕಾರ ಉರುಳಲಿದೆ ಎಂದು ಆನಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಸ್. ಬಸವಂತಪ್ಪ ಎಚ್ಚರಿಸಿದರು.
ಮಾಯಕೊಂಡ ಕ್ಷೇತ್ರದ ಅಣಜಿ ಗ್ರಾಮದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಪ್ರತಿ ಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಪ್ರಧಾನಿಯವರು ಪಕ್ಕದ ಪಾಕಿಸ್ತಾನಕ್ಕೆ ಹೋಗಿ ಊಟ ಮಾಡಿ ಬರುತ್ತಾರೆ. ಆದರೆ, ದೇಶದ ರೈತರು ಪ್ರತಿಭಟನೆ ನಡೆಸುತ್ತಿರುವಾಗ ಅವರ ಬಳಿ ಹೋಗದೇ ಅವರ ಸಮಸ್ಯೆಗಳನ್ನು ಆಲಿಸಲು ಪ್ರಧಾನಿಗಳಿಗೆ ಸಮಯವಿಲ್ಲದಿರುವುದು ದುರಾದೃಷ್ಟಕರ ಎಂದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಾಭಿವೃದ್ಧಿಗೆ ಶ್ರಮಿಸಿ ರೈತರ ಕೃಷಿ ಚಟುವಟಿಕೆಗಳ ಬೆಳವಣಿಗೆಗೆ ಸೂಕ್ತ ಕಾಯ್ದೆಗಳನ್ನು ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವುದನ್ನು ಅವರು ಸ್ಮರಿಸಿದರು.
ಎ.ಪಿ.ಎಂ.ಸಿ. ಅಧ್ಯಕ್ಷ ಎಸ್.ಬಿ. ಚಂದ್ರಶೇಖರ್ ಮಾತನಾಡಿ, ಎ.ಪಿ.ಎಂ.ಸಿ. ಕಾಯ್ದೆಯಿಂದ ರೈತರು ಬೀದಿಗೆ ಬರುವ ಪರಿಸ್ಥಿತಿ ಉಂಟಾಗಿದೆ. ಎ.ಪಿ.ಎಂ.ಸಿ.ಯನ್ನು ಮುಚ್ಚುವಂತಾಗಿದ್ದು, ರೈತರ ಅನುಕೂಲಕ್ಕಿರುವ ಆವರ್ತ ನಿಧಿಯನ್ನು ಸಮರ್ಪಕವಾಗಿ ಬಳಸದೇ ರೈತರ ಬೆಳೆಗಳನ್ನು ಸಹ ಸೂಕ್ತ ಬೆಂಬಲ ಬೆಲೆಯಲ್ಲಿ ಖರೀದಿಸದೇ ಆವರ್ತ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಹರಿಹಾಯ್ದರು.
ಜಿ.ಪಂ. ಸದಸ್ಯರಾದ ಓಬಳಪ್ಪ, ಎ.ಪಿ.ಎಂ.ಸಿ. ಮಾಜಿ ಉಪಾಧ್ಯಕ್ಷ ರಾಜೇಂದ್ರ, ತಾ.ಪಂ. ಸದಸ್ಯ ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಕೊಟ್ರೇಶ್ ನಾಯ್ಕ, ರಾಜಾನಾಯ್ಕ, ಅಂಜಿನಪ್ಪ, ಮಾಯಕೊಂಡ ರುದ್ರೇಶ್, ಕೊಗ್ಗನೂರು ಹನುಮಂತಪ್ಪ ಮತ್ತಿತತರು ಮಾತನಾಡಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮತ್ತು ಕೃಷಿ ಕಾಯ್ದೆಯನ್ನು ಹಿಂಪಡೆಯಲು ಆಗ್ರಹಿಸಿದರು.
ತಾ.ಪಂ. ಮಾಜಿ ಸದಸ್ಯ ಶಂಭುಲಿಂಗಪ್ಪ, ಕಾಂಗ್ರೆಸ್ ಮುಖಂಡರಾದ ಆಲೂರು ವೀರಭದ್ರಪ್ಪ, ಆನಗೋಡು ಗ್ರಾ.ಪಂ. ಮಾಜಿ ಅಧ್ಯಕ್ಷ ರವಿ, ಅಣಜಿ ಗ್ರಾ.ಪಂ. ಅಧ್ಯಕ್ಷ ಜ್ಯೋತಿ ಶಶಿಕುಮಾರ್, ಪಿ.ಎನ್. ಶಿವಪ್ರಕಾಶ್, ಅಣಜಿ ಹೊನ್ನಪ್ಪ, ಬಸವಲಿಂಗಪ್ಪ, ರಾಮಗೊಂಡನ ಹಳ್ಳಿ ಶರಣಪ್ಪ, ಮೆಳ್ಳೆಕಟ್ಟೆ ಹನುಮಂತಪ್ಪ, ಆಲೂರು ಸೋಮಣ್ಣ, ಹುಲಿಕಟ್ಟೆ ಗ್ರಾ.ಪಂ. ಅಧ್ಯಕ್ಷ ಕರಿಯಪ್ಪ, ಬಸವರಾಜ್, ಜ್ಞಾನೇಶ್, ಮ್ಯಾಸರಹಳ್ಳಿ ಪ್ರಭು, ಗುಮ್ಮನೂರು ಲೋಕೇಶ್, ಸಿದ್ದನೂರು ಪ್ರಕಾಶ್, ಕಂದನಕೋವಿ ದೇವೇಂದ್ರಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.