ದಾವಣಗೆರೆ, ಏ. 15- ದಾವಣಗೆರೆ ಜಿಲ್ಲೆಯಾದ್ಯಂತ ಭತ್ತದ ಬೆಳೆಗೆ ದುಂಡಾಣು ಅಂಗಮಾರಿ ರೋಗ ಕಂಡು ಬಂದಿದ್ದು, ಇದರ ನಿರ್ವಹಣೆಗೆ ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ. ಭತ್ತದ ಬೆಳೆಯಲ್ಲಿ ಬೆಳವಣಿಗೆಯಿಂದ ತೆನೆ ಒಡೆಯುವ ಹಂತದವರೆಗೆ ತಲುಪಿ ಅಲ್ಲಲ್ಲಿ ದುಂಡಾಣು ಅಂಗಮಾರಿ ರೋಗ ಬಾಧೆ ಹೆಚ್ಚಾಗಿ ಕಾಳು ಕಟ್ಟುವ ಹಂತದವರೆಗೆ ಕಾಣಿಸಿಕೊಂಡು ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.
ಅಲ್ಲದೇ ತೆನೆಯ ಅಂಚಿನ ಗರಿಗಳು ಒಣಗಿದಂತಾಗಿ ತುದಿಯು ಹೆಡೆಯಂತೆ ಬಾಗಿರುತ್ತವೆ. ಎಲೆಯ ಅಂಚಿನಲ್ಲಿ ಉದ್ದನೆಯ ಒಣಗಿದ ಪಟ್ಟಿಗಳು ಕಂಡುಬರುತ್ತಿದ್ದು, ಮೋಡ ಮುಸುಕಿದ, ಹೆಚ್ಚು ಆರ್ದ್ರತೆಯಿಂದ ಕೂಡಿದ ವಾತಾವರಣದಲ್ಲಿ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ರೋಗವನ್ನು ತಡೆಗಟ್ಟಲು ಕೃಷಿ ಇಲಾಖೆ ಸಲಹೆ ನೀಡಿದ್ದು, ಗದ್ದೆಯಲ್ಲಿ ಹಾಗೂ ಗದ್ದೆ ಬದುಗಳಲ್ಲಿ ಕಳೆ ತೆಗೆದು, ಜಮೀನಿನಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಆದಷ್ಟು ಎರಡು ಹಂತಗಳಲ್ಲಿ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು. ಸಾವಯವ ಹಾಗೂ ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರು 10 ಲೀಟರ್ ನೀರಿಗೆ 1 ಲೀ. ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಿ ನೀರಿನೊಂದಿಗೆ ಸಗಣಿ ರಾಡಿ ಹರಿಸುವುದು ರೋಗ ನಿರ್ವಹಣೆಯ ಉತ್ತಮ ಕ್ರಮವಾಗಿದೆ.
ರಾಸಾಯನಿಕ ಸಿಂಪರಣೆಗಾಗಿ 0.5 ಗ್ರಾಂ ಸ್ಟ್ರೆಪ್ಟೋಸೈಕ್ಲಿನ್ ಮತ್ತು 2.15 ಗ್ರಾಂ ತಾಮ್ರದ ಆಕ್ಸಿಕ್ಲೋರೈಡನ್ನು 01 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ, ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.