ವಾಸವಿ ಜಗದ್ಗುರು ಸಚ್ಚಿದಾನಂದ ಸರಸ್ವತಿ ಶ್ರೀ
ದಾವಣಗೆರೆ, ಫೆ. 13 – ಬಡವ ಹಾಗೂ ಶ್ರೀಮಂತ ಎಂಬ ಭೇದವಿಲ್ಲದೆ ಸರ್ವರಲ್ಲೂ ಸಮಾನವಾಗಿ ಲಭ್ಯವಿರುವ ಸಮಯ ಎಂಬ ಅಮೂಲ್ಯ ವಸ್ತುವನ್ನು ಕುಟುಂಬ ಹಾಗೂ ಸಮಾಜಕ್ಕಾಗಿ §ತ್ಯಾಗ¬ ಮಾಡುವ ಮನೋಭಾವ ಹೊಂದಬೇಕು ಎಂದು ವಾಸವಿ ವಿಶ್ವಗುರು ಪೀಠದ ಜಗದ್ಗುರು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದ್ದಾರೆ.
ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಭಕ್ತಾಂಜನೇಯ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಬಡವ ಹಾಗೂ ಶ್ರೀಮಂತರ ಆಸ್ತಿಯಲ್ಲಿ ವ್ಯತ್ಯಾಸವಿರಬಹುದು. ಆದರೆ, ಸಮಯ ಮಾತ್ರ ಎಲ್ಲರಿಗೂ ದಿನಕ್ಕೆ 24 ಗಂಟೆಯಷ್ಟೇ ಲಭ್ಯವಿರುತ್ತದೆ. ಇಂತಹ ಸಮಯವನ್ನು ವಾಟ್ಸ್ಅಪ್, ಫೇಸ್ಬುಕ್ ಮುಂತಾದವುಗಳ ಮೂಲಕ ಬೇರೆಯವರ ಚಟುವಟಿಕೆಗಳ ವೀಕ್ಷಣೆಗೆ §ತ್ಯಾಗ¬ ಮಾಡುತ್ತಿದ್ದೇವೆ. ಇದೇ ಸಮಯವನ್ನು ತಮ್ಮ ಕುಟುಂಬಕ್ಕೆ, ಸಮಾಜಕ್ಕೆ ಹಾಗೂ ದೈವಕ್ಕೆ ತ್ಯಾಗ ಮಾಡಬೇಕು ಎಂದ ಶ್ರೀಗಳು, ಆರ್ಯವೈಶ್ಯ ಸಮಾಜಕ್ಕೆ ತ್ಯಾಗ ಸಹಜವಾಗಿ ಬಂದ ಗುಣ. ಇದನ್ನು ಮುಂದುವರೆಸಬೇಕು ಎಂದು ತಿಳಿಸಿದರು.
ಈ ದಿನ ಮಾತೆ ವಾಸವಿಯ ಆತ್ಮಾರ್ಪಣೆ ಹಾಗೂ ವಿಶ್ವರೂಪದ ದರ್ಶನದ ದಿನ. ವಿಶ್ವರೂಪದರ್ಶನ ಎಂದರೆ ಅಸಂಖ್ಯ ಕೈಗಳನ್ನು ಹೊಂದುವುದು, ಆ ಅಸಂಖ್ಯ ಕೈಗಳಲ್ಲಿ ಆಯುಧಗಳನ್ನು ಹಿಡಿಯುವುದು ಎಂದಲ್ಲ. ಸೂರ್ಯ ಚಂದ್ರರಿಂದ ಹಿಡಿದು ಪರಿಸರ, ಪ್ರತಿ ವ್ಯಕ್ತಿಯಲ್ಲೂ ದೈವೀಶಕ್ತಿ ಗುರುತಿಸುವುದೇ ವಿಶ್ವರೂಪ ದರ್ಶನ. ಪ್ರತಿ ಹೃದಯದಲ್ಲಿ ದೈವೀಶಕ್ತಿ ಇರುವುದನ್ನು ಗೌರವಿಸುವುದೇ ವಿಶ್ವರೂಪ ದರ್ಶನ, ಇದನ್ನು ಕಂಡುಕೊಂಡವರೇ ಜ್ಞಾನಿಗಳು ಎಂದು ಪ್ರತಿಪಾದಿಸಿದರು.
ಎಲ್ಲರಲ್ಲೂ ಇರುವ ದೈವೀಶಕ್ತಿಗೆ ನಮಸ್ಕರಿಸುವ ಗುಣ ಬೆಳೆಸಿಕೊಂಡರೆ, ವಿಶ್ವರೂಪ ಚಿಂತನೆ ಇಟ್ಟುಕೊಂಡರೆ ಸಮಾಜದಲ್ಲಿ ಮಾಲಿನ್ಯವಾಗಲೀ, ಹಾನಿಯಾಗಲೀ ಇರುವುದಿಲ್ಲ ಎಂದು ಶ್ರೀಗಳು ಹೇಳಿದರು.
ಕುಟುಂಬಕ್ಕಾಗಿ ತ್ಯಾಗ ಮಾಡಲು ಹಿಂದಿನವರು ಹಿಂಜರಿಯುತ್ತಿರಲಿಲ್ಲ. ಆದರೆ, ಈಗ ತಂದೆ, ತಾಯಿ ಹಾಗೂ ಮಕ್ಕಳು ಕುಟುಂಬಕ್ಕೆ ತ್ಯಾಗ ಮಾಡಲು ಹಿಂಜರಿದು ಸ್ವಾರ್ಥ ಬೆಳೆಸಿಕೊಳ್ಳುತ್ತಿದ್ದಾರೆ. ಇಂತಹ ಸ್ವಾರ್ಥದಿಂದ ಕುಟುಂಬ ಹಾಗೂ ಸಮಾಜಕ್ಕೆ ಹಾನಿಯಾಗುತ್ತದೆ. ತ್ಯಾಗಮಾತೆಯಾದ ವಾಸವಿಯ ಆದರ್ಶದಂತೆ ನಾವೂ ತ್ಯಾಗ ಗುಣಗಳನ್ನು ಬೆಳೆಸಿಕೊಂಡು ಕುಟುಂಬ ಹಾಗೂ ಸಮಾಜವನ್ನು ಗಟ್ಟಿ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್, ಬರುವ ಜೂನ್ 20ರಂದು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ವಾಸವಿ ವಿಶ್ವಗುರು ಪೀಠಾರೋಹಣ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಲಿದೆ. ಈ ಸಮಾರಂಭಕ್ಕೆ ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾಗಲಿದ್ದಾರೆ. ಸಮಾರಂಭಕ್ಕಾಗಿ ದಾವಣಗೆರೆ ಜಿಲ್ಲೆಯಿಂದ 25 ಬಸ್ಗಳು ತೆರಳಲಿವೆ. ಸಮಾರಂಭಕ್ಕೆ 4 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಲಿದ್ದು, ಸಮಾಜದವರು ದೇಣಿಗೆಯಿಂದ ನೆರವಾಗಬೇಕೆಂದು ಮನವಿ ಮಾಡಿಕೊಂಡರು.
ಇದಕ್ಕೂ ಮುಂಚೆ ಶ್ರೀ ಬೀರೇಶ್ವರ ದೇವಸ್ಥಾನದಿಂದ ಮಂಡಿಪೇಟೆ ಮುಖಾಂತರ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನಕ್ಕೆ ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆ ತರಲಾಯಿತು.
ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಹಾಗೂ ಶ್ರೀ ಆಂಜನೇಯ ಸ್ವಾಮಿಗೆ ಕ್ಷೀರಾಭಿಷೇಕ, ಮನ್ಯ ಸೂಕ್ತ ಹೋಮ, ನವಗ್ರಹ ಹೋಮ, ಆಲಯ ಅಂಗ ಹೋಮ ಮತ್ತು ಪ್ರಧಾನ ದೇವತಾ ಶ್ರೀ ಕನ್ಯಕಾ ಪರಮೇಶ್ವರಿ ಹೋಮಗಳು ನೆರವೇರಿದವು.
ಈ ಸಂದರ್ಭದಲ್ಲಿ ದೇವಸ್ಥಾನದ ಗೌರವಾಧ್ಯಕ್ಷ ಆರ್.ಎಸ್. ನಾರಾಯಣಸ್ವಾಮಿ, ಆರ್.ಜಿ. ನಾಗೇಂದ್ರ ಪ್ರಕಾಶ್, ಕಾರ್ಯದರ್ಶಿ ಜೆ. ರವೀಂದ್ರ ಗುಪ್ತ, ಸಹ ಕಾರ್ಯದರ್ಶಿ ಎ.ಎಸ್. ನಾರಾಯಣ ಸ್ವಾಮಿ, ಕನ್ನಿಕಾ ಪರಮೇಶ್ವರ ಬ್ಯಾಂಕ್ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ, ಸಮಾಜದ ಮುಖಂಡರಾದ ನಾಗಭೂಷಣ್, ನಾಗರಾಜ ಗುಪ್ತ, ಅನಂತರಾಮ ಶೆಟ್ಟಿ, ಎಂ.ಪಿ. ನಾಗೇಂದ್ರ, ಬಿ.ಎಸ್. ಶಿವಾನಂದ, ಪಿ. ರಾಜಗುಪ್ತ, ಬಿ.ಪಿ. ನಾಗಭೂಷಣ, ಮಂಜುನಾಥ ಪಿ. ಗುಂಡಾಲ್ ಮತ್ತಿತರರು ಉಪಸ್ಥಿತರಿದ್ದರು.