ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ಗೆ ಆಗ್ರಹದ ಕೂಗು

ಮಾನವೀಯತೆ ಮರೆದ ಡಿವೈಎಸ್ಪಿ ತಾಮ್ರಧ್ವಜ

ಬಸ್‍ನಲ್ಲಿ ಭರಮಸಾಗರದಿಂದ ದಾವಣಗೆರೆಯ ಆಸ್ಪತ್ರೆಗೆ ಮಾನಸ ಎಂಬ ಮಹಿಳೆಯು ಮಗಳಿಗೆ ಚಿಕಿತ್ಸೆ ಕೊಡಿ ಸಲು ತೆರಳುತ್ತಿದ್ದಾಗ, ಹೆಚ್. ಕಲಪನಹಳ್ಳಿ ಬಳಿ ಹೆದ್ದಾರಿ ಚಳವಳಿ ಸಂದರ್ಭದಲ್ಲಿ ವಾಹನಗಳ ಸಂಚಾರ ಸ್ಥಗಿತಕೊಂಡಿದ್ದರಿಂದ ಆ ಮಹಿಳೆಯ ಮಗಳ ತುರ್ತು ಚಿಕಿತ್ಸೆಗೆ ಮನವಿ ಮಾಡಿದಾಗ,  ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಅವರು ಬೇರೆ ವಾಹನದ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದರು.

ಗಂಟೆಗಳ ಕಾಲ ರಸ್ತೆ ತಡೆ

ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆಯಿಂದಾಗಿ ಎರಡೂ ಬದಿಯ ರಸ್ತೆಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡು, ವಾಹನಗಳ ಸಾಲು ಸುಮಾರು 2 ಕಿ.ಮಿ. ದೂರದವರೆಗೂ ಇತ್ತು. ದೂರದ ಊರುಗಳಿಗೆ ತೆರಳಬೇಕಾದ ವಾಹನಗಳ ಸವಾರರು, ಬಸ್ ನ ಪ್ರಯಾಣಿಕರು ಹೈರಾಣಾದರು. ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಜನರು ಇಳಿದು ಸಮೀಪದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ತೆರಳಿದರು. ದಾವಣಗೆರೆಗೆ ಟಿಕೆಟ್ ಪಡೆದು ಬಸ್ ಇಳಿದಿದ್ದ ಮತ್ತೆ ಕೆಲ ಪ್ರಯಾಣಿಕರು ಪುನಃ ಬಸ್‌ನಲ್ಲಿ ಪ್ರಯಾಣಿಸಲು  ಹರಸಾಹಸ ಪಟ್ಟರು. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಪ್ರತಿಭಟನೆ ಕೈ ಬಿಡುವಂತೆ ಪೊಲೀಸರು ಹೇಳಿದ ವೇಳೆ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ಪೊಲೀಸರ ಮನವೊಲಿಕೆಗೆ ಪ್ರತಿಭಟನಾಕಾರರು ಸ್ಪಂದಿಸಿ ಮೂರು ತಾಸಿನ ಪ್ರತಿಭಟನೆಯನ್ನು ಒಂದೇ ಗಂಟೆಗೆ ಸೀಮಿತಗೊಳಿಸಿದರು. ಹೋರಾಟ ಕೈ ಬಿಡುತ್ತಿದ್ದಂತೆ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ರಸ್ತೆ ಮೇಲಿದ್ದ ಸಾರ್ವಜನಿಕರನ್ನು ಸುರಕ್ಷಿತವಾಗಿ ರಸ್ತೆ ದಾಟಿಸಲು ಪೊಲೀಸರು ಕಾರ್ಯಪ್ರವೃತ್ತರಾದರು.

ದಾವಣಗೆರೆ, ಫೆ.6- ಜಿಲ್ಲೆಯಲ್ಲಿ ರೈತ ಸಂಘಟನೆಗಳು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಿ, ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಆಗ್ರಹದ ಕೂಗು ಹಾಕಿದರು.

ತಾಲ್ಲೂಕಿನ ಹೆಚ್. ಕಲಪನಹಳ್ಳಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಂಜುನಾಥ ಬಣ), ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ), ಅಖಿಲ ಭಾರತ ರೈತ ಹೋರಾಟ ಸಂಘರ್ಷ ಸಮಿತಿ ಜಿಲ್ಲಾ ಘಟಕ, ಎಐಕೆಎಸ್ ಸಂಘಟನೆ, ಎಐಡಿಎಸ್‍ಓ ಸಂಘಟನೆ, ಎಐಕೆಕೆಎಂಎಸ್, ಆಮ್ ಆದ್ಮಿ ಪಾರ್ಟಿ, ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಎಡಪಂಥೀಯ ಸಂಘಟನೆಗಳು ಸೇರಿದಂತೆ ಸುಮಾರು 14 ವಿವಿಧ ಸಂಘಟನೆಗಳು ಜಂಟಿಯಾಗಿ ರಾಷ್ಟ್ರೀಯ ಹೆದ್ದಾರಿ ತಡೆದು, ಪ್ರತಿಭಟನಾ ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ನೀರ್ಥಡಿ ಬಳಿಯೂ ರೈತ ಸಂಘಟನೆಯಿಂದ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗಿದೆ.

ದುಡಿಯುವ ಕೈಗಳನ್ನು ಕೈ ಎತ್ತುವಂತೆ ಮಾಡಬೇಡಿ. ಮಾರಕವಾಗಿರುವ ಎಪಿಎಂಸಿ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ, ಕೃಷಿ ಕಾಯ್ದೆಗಳ ತಿದ್ದುಪಡಿ ವಿರುದ್ಧ ಕೆಲ ದಿನಗಳಿಂದ ದೆಹಲಿಯಲ್ಲಿ ನಡೆಸುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವುದು ಎಷ್ಟು ಸರಿ. ನೀವು ಜನನಾಯಕರೇ ಎಂದು ಅಮಿತ್‌ ಷಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತಿಭಟನಾ ನಿರತ ರೈತರು ಪ್ರಶ್ನಿಸಿದರಲ್ಲದೇ, ರೈತರ ಸಂಕಷ್ಟಕ್ಕೆ ಸ್ಪಂದಿಸಲು ಆಗದಿದ್ದರೆ ರಾಜೀನಾಮೆ ಕೊಡಿ. ರೈತರನ್ನು ಕೆಣಕಬೇಡಿ ಎಂದು ಕಿಡಿಕಾರಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕು. ರೈತರು ಬೆಳೆದ ಬೆಳೆಗಳಿಗೆ ಅವರೇ ಬೆಲೆ ನಿಗದಿ ಮಾಡುವ ಕಾಯ್ದೆ ಜಾರಿಗೆ ತರಬೇಕು. ಈ ಕಾಯ್ದೆಯನ್ನು ಉಲ್ಲಂಘಿಸಿದರೆ ಆರು ತಿಂಗಳು ಜೈಲು, ದಂಡ ಮತ್ತು ಲೈಸನ್ಸ್ ರದ್ದನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ರವಿಕುಮಾರ ಬಲ್ಲೂರು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಕಾಯ್ದೆಗಳನ್ನು ಶಿಫಾರಸ್ಸು ಮಾಡಿದ ಪಂಡಿತರು ಮತ್ತು ಕೇಂದ್ರ, ರಾಜ್ಯ ಕೃಷಿ ಮಂತ್ರಿಗಳು ರೈತರೊಂದಿಗೆ ಚರ್ಚೆಗೆ ಬರಬೇಕು. ಹಾದಿ-ಬೀದಿಯಲ್ಲಿ ಚರ್ಚೆ ಬೇಡ, ನೀವುಗಳು ಯಾರು ಕೃಷಿ ಕಾಯ್ದೆಗಳನ್ನು ಬೆಂಬಲಿಸುತ್ತಿದ್ದೀರಿ ಅವರ ಜಮೀನಿನಲ್ಲೇ ಚರ್ಚೆ ಮಾಡಬೇಕು. ನಾವುಗಳು ನೀವು ಹೇಳಿದ ಸ್ಥಳಕ್ಕೆ ಬರುತ್ತೇವೆ. ಆಗ, ಈ ಕಾಯ್ದೆಗಳಿಂದ ಏನೇನು ಅನುಕೂಲ ಆಗಲಿದೆ ಎಂದು ನಮಗೆ ಮನದಟ್ಟು ಮಾಡಲಿ ಎಂದು ಸವಾಲು ಹಾಕಿದರು.

ಹೆದ್ದಾರಿ ಚಳವಳಿಯಲ್ಲಿ ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಶೇಖರ ನಾಯ್ಕ, ಗುಮ್ಮನೂರು ಬಸವರಾಜ್, ಕೆಂಚಮ್ಮನಹಳ್ಳಿ ಹನುಮಂತ, ನೀರ್ಥಡಿ ತಿಪ್ಪೇಶ್, ಹುಚ್ಚವ್ವನಹಳ್ಳಿ ಪ್ರಕಾಶ್, ಹುಚ್ಚವ್ವನಹಳ್ಳಿ ಗಣೇಶ್, ಕಾರ್ಮಿಕ ಮುಖಂಡರಾದ ಹೆಚ್.ಜಿ. ಉಮೇಶ್, ವಿವಿಧ ಸಂಘಟನೆಗಳ ಮುಖಂಡರಾದ ರೈತ ಕೃಷಿ ಕಾರ್ಮಿಕ ಸಂಘಟನೆ ರಾಜ್ಯಾಧ್ಯಕ್ಷ ಡಾ. ಸುನೀತ್ ಕುಮಾರ್, ಅಪರ್ಣಾ ಬಿ.ಆರ್. ಶಶಿಧರ್, ಮಂಜುನಾಥ ಕೈದಾಳೆ, ಅಣಬೇರು ತಿಪ್ಪೇಸ್ವಾಮಿ, ಸತೀಶ್ ಅರವಿಂದ್, ಭಾರತಿ, ಪರಶುರಾಮ್, ಸೌಮ್ಯ, ನಾಗಜ್ಯೋತಿ, ಪೂಜಾ, ಲೋಕೇಶ್ ನೀರ್ಥಡಿ, ಬೀರಲಿಂಗಪ್ಪ ನೀರ್ಥಡಿ, ಜನಶಕ್ತಿ ಸತೀಶ್ ಅರವಿಂದ್ ಇತರರು ಭಾಗವಹಿಸಿದ್ದರು. 

error: Content is protected !!