ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಎಂ. ಐಹೊಳೆ
ದಾವಣಗೆರೆ, ಫೆ.6- ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರೂ, ರಾಯಬಾಗ್ ಶಾಸಕರೂ ಆದ ದುರ್ಯೋಧನ ಎಂ.ಐಹೊಳೆ ಅವರು ಶನಿವಾರ ನಗರದಲ್ಲಿನ ನಿಗಮದ ಜಿಲ್ಲಾ ಕಚೇರಿಗೆ ಭೇಟಿ ನೀಡಿ ವಿವಿಧ ಯೋಜನೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಿಗಮದ ವತಿಯಿಂದ ಸವಲತ್ತು ಗಳನ್ನು ಪಡೆದ ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡು, ಆರ್ಥಿಕ ಮಟ್ಟ ಸುಧಾರಿಸಿಕೊಳ್ಳು ವಂತೆ, ಮಕ್ಕಳಗೆ ಉತ್ತಮ ಶಿಕ್ಷಣ ನೀಡಿ ಜೀವನದಲ್ಲಿ ಪ್ರಗತಿ ಹೊಂದುವಂತೆ ಕರೆ ನೀಡಿದರು.
ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ಇಲ್ಲಿಯವರೆಗೆ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶೇ.80ರಷ್ಟು ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ಪಿ. ರಮೇಶ್, ನಿಗಮದಡಿ 105 ಜನರಿಗೆ ಕೊಳವೆ ಬಾವಿ ಕೊರೆಸುವ ಗುರಿ ಹೊಂದಲಾಗಿದ್ದು, 86 ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ. ಉಳಿದವರಿಗೆ ಶೀಘ್ರವೇ ಸೌಲಭ್ಯ ವಿತರಿಸಲಾಗುವುದು ಎಂದು ಹೇಳಿದರು.
ಲಿಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರೂ, ಮಾಯಕೊಂಡ ಶಾಸಕರೂ ಆದ ಪ್ರೊ.ಲಿಂಗಣ್ಣ ಮಾತನಾಡಿ, ಸಮಾಜಕ್ಕೆ ಬರುವ ಸವಲತ್ತುಗಳನ್ನು ನೀಡಿ, ಸಮಾಜವನ್ನು ಮೇಲೆತ್ತುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿದರು.
ಕೊರೊನಾ ಹಿನ್ನೆಲೆಯಲ್ಲಿ ನಿಗಮಗಳಿಗೆ ಅನುದಾನ ಕಡಿಮೆಯಾಗಿದೆ. ಮುಂದಿನ ವರ್ಷ ಹೆಚ್ಚು ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡಿದ್ದೇವೆ. ಪ್ರಾಯಶಃ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವ ಭರವಸೆ ಇದೆ ಎಂದು ಹೇಳಿದರು.
ಈಗಾಗಲೇ ಬೆಂಗಳೂರು, ತುಮಕೂರು, ಚಿತ್ರದುರ್ಗ, ಹುಬ್ಬಳ್ಳಿ ಮುಂತಾದ ಜಿಲ್ಲೆಗಳ ಪ್ರವಾಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ನಿಗಮದ ಕೆಲಸ ಕಾರ್ಯಗಳನ್ನು ಪರಿಶೀಲಿಸಿ, ಪ್ರಗತಿಗೆ ಶ್ರಮಿಸುವುದಾಗಿ ಹೇಳಿದರು.
ಐಎಸ್.ಬಿ. ಯೋಜನೆಯಡಿ ಹರಿಹರ ತಾಲ್ಲೂಕು ಮಿಟ್ಲಕಟ್ಟೆ ಗ್ರಾಮದ ಸುಮಲತಾ ಅವರಿಗೆ 1 ಲಕ್ಷ ರೂ., ಹೊನ್ನಾಳಿ ತಾಲ್ಲೂಕು ಐನೂರು ಗ್ರಾಮದ ಮಂಜಮ್ಮ ಅವರಿಗೆ 1 ಲಕ್ಷ ರೂ., ಎಂ.ಸಿ.ಎಫ್. ಪ್ರೇರಣಾ ಯೋಜನೆಯಡಿ ಮಾಯಕೊಂಡ ಕ್ಷೇತ್ರದ ಡಾ.ಬಿ.ಆರ್. ಅಂಬೇಡ್ಕರ್ ಮಹಿಳಾ ಸ್ವ ಸಹಾಯ ಸಂಘಕ್ಕೆ 1.25 ಲಕ್ಷ ರೂ. ಹಾಗೂ ಸಮೃದ್ಧಿ ಯೋಜನೆಯಡಿ ಹರಪನಹಳ್ಳಿ ತಾಲ್ಲೂಕು ಚಿಕ್ಕಕಬ್ಬಳ್ಳಿ ಗ್ರಾಮದ ನೇತ್ರಾವತಿ ಅವರಿಗೆ 50 ಸಾವಿರ ರೂ.ಗಳ ಸಹಾಯಧನದ ಚೆಕ್ ವಿತರಿಸಲಾಯಿತು.
ಹರಿಹರ ತಾಲ್ಲೂಕು ಗುತ್ತೂರು ಗ್ರಾಮದ ಮೈಲಾರಪ್ಪ ಎಂಬುವವರು ನಿಗಮದ ಸಮೃದ್ಧಿ ಯೋಜನೆಯಡಿ 10 ಲಕ್ಷ ರೂ.ಗಳ ಸಹಾಯ ಧನ ಪಡೆದು ಚೆರಿ ಟಯರ್ಸ್ ಘಟಕ ಸ್ಥಾಪಿಸಿದ್ದು, ಅಧ್ಯಕ್ಷರು ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ನಿಗಮದ ಉಪ ಪ್ರಧಾನ ವ್ಯವಸ್ಥಾಪಕ ಮಂಜುನಾಥ್, ಸಫಾಯಿ ಕರ್ಮಚಾರಿಗಳ ಸಂಘದ ಜಿಲ್ಲಾಧ್ಯಕ್ಷ ಹುಲಿಗೇಶ್ ಇತರರು ಈ ಸಂದರ್ಭಲ್ಲಿ ಉಪಸ್ಥಿತರಿದ್ದರು.