ದಾವಣಗೆರೆ, ಫೆ. 6 – ಒಂದೆಡೆ ಕೈಗಾರಿಕಾ ಪ್ರದೇಶ ಗಳಿಗಾಗಿ ರೈತರಿಂದ ಜಮೀನು ವಶಪಡಿಸಿಕೊಂಡಾಗ ಅವರಿಗೆ ಸ್ವಲ್ಪ ಹೆಚ್ಚು ಪರಿಹಾರ ಕೊಡಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಉದ್ಯಮಿಗಳು ಕೈಗಾರಿಕೆ ಸ್ಥಾಪಿಸಲು ಕಡಿಮೆ ಬೆಲೆಗೆ ಪ್ಲಾಟ್ಗಳು ಸಿಗುತ್ತಿಲ್ಲ ಎಂಬ ಅಭಿಪ್ರಾಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ವ್ಯಕ್ತವಾಯಿತು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದುಬಾರಿ ದರದ ಕುರಿತು ಚರ್ಚೆ ನಡೆದು, ದರ ಪರಿಷ್ಕರಣೆಗೆ ಪ್ರಸ್ತಾವನೆ ಕಳಿಸಲು ತೀರ್ಮಾನಿಸಲಾಯಿತು.
ದರ ಹೆಚ್ಚಾಗಿರುವ ಬಗ್ಗೆ ಮಾತನಾಡಿದ ಉದ್ಯಮಿ ಎಸ್.ಎನ್. ಬಾಲಾಜಿ, ಕೆ.ಎಸ್.ಎಸ್.ಐ.ಡಿ.ಸಿ. ಪ್ಲಾಟ್ ಪಡೆಯಲು 2.20 ಕೋಟಿ ರೂ.ಗಳವರೆಗೆ ವೆಚ್ಚವಾಗುತ್ತಿದೆ. ಇಷ್ಟು ಸಾಲದು ಎಂಬಂತೆ, ನಂತರದಲ್ಲಿ ಸೌಲಭ್ಯಗಳಿಗೆ ಮತ್ತಷ್ಟು ಹಣ ಕೇಳಲಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ ಬ್ಯಾಂಕುಗಳಿಂದ ಸಾಲವೂ ಸಿಗುವುದಿಲ್ಲ. ಹೀಗಾಗಿಯೇ ಉದ್ಯಮ ಸ್ಥಾಪಿಸಲು ಆಸಕ್ತಿ ಬರುತ್ತಿಲ್ಲ ಎಂದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದ ಉದ್ಯಮಿಗಳಿಗೆ ಶೇ.75ರವರೆಗೆ ಪ್ಲಾಟ್ ದರದಲ್ಲಿ ಸಬ್ಸಿಡಿ ಇದೆ. ಈ ರಿಯಾಯಿತಿ ಕೊಟ್ಟರೂ ಹೊರೆಯಾಗುತ್ತಿದೆ. ಇನ್ನು ಸಾಮಾನ್ಯ ವರ್ಗದವರ ಹೊರೆ ಮತ್ತಷ್ಟಾಗಿದೆ. ಹೀಗಾಗಿ ಉದ್ಯಮಿಗಳು ಹಿಂಜರಿಯುತ್ತಿದ್ದಾರೆ ಎಂದರು.
ಕೆಐಎಡಿಬಿ ಮೂಲಕ ನೀಡಲಾಗುವ ಜಮೀನಿಗೆ ಪ್ರತಿ ಎಕರೆಗೆ 83 ಲಕ್ಷ ರೂ. ದರ ನಿಗದಿ ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಬೀಳಗಿ, ರೈತರಿಗೆ ಒಂದು ಲಕ್ಷ ರೂ. ಹೆಚ್ಚು ಪರಿಹಾರ ಕೊಡಿ ಎಂದರೂ ಸಾಧ್ಯವಾಗದು ಎನ್ನುತ್ತೀರಿ. ನಾನು ಕೆಐಎಡಿಬಿಯಲ್ಲಿ ಕೆಲಸ ಮಾಡಿದ್ದೇನೆ. ರೈತರಿಂದ ಪಡೆದ ಜಮೀನು ಯಾವ ರೀತಿ ಅಭಿವೃದ್ಧಿ ಪಡಿಸುತ್ತೀರಾ ಎಂಬುದು ಗೊತ್ತಿದೆ ಎಂದರು.
ಹರಿಹರ ತಾಲ್ಲೂಕಿನ ಸಾರಥಿ – ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ನಿವೇಶನ ಪಡೆಯಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರಿಂದ 18 ಅರ್ಜಿಗಳು ಬಂದಿವೆ. ಒಂದು ನಿವೇಶನಕ್ಕೆ ಒಂದೇ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿವೇಶನ ನೀಡಬಹುದು ಎಂದು ಸಭೆಗೆ ಅಧಿಕಾರಿಗಳು ತಿಳಿಸಿದರು.
ಈ ವಸಹಾತುವಿನಲ್ಲಿ 95 ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ 57 ನಿವೇಶನಗಳು ಹಂಚಿಕೆಯಾಗದೇ ಉಳಿದಿವೆ. ನಿವೇಶನ ಪಡೆದ ಎರಡು ವರ್ಷಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಕ್ರಮ ತೆಗೆದುಕೊಳ್ಳದ 19 ಜನರಿಂದ ಒಂದು ಕೋಟಿ ರೂ.ಗಳವರೆಗೆ ದಂಡ ದೊರೆತಿದೆ ಎಂದೂ ಅಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರಿಹರದ ಉದ್ಯಮಿ ಹನುಮಂತರಾವ್, ಚದುರ ಮೀಟರ್ ಜಾಗಕ್ಕೆ 5 ಸಾವಿರ ರೂ.ಗಳ ಹೆಚ್ಚಿನ ದರ ನಿಗದಿ ಪಡಿಸಲಾಗಿದೆ. ಹೀಗಾಗಿ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಟ್ಗಳು ಇದ್ದರೂ ಹೂಡಿಕೆ ಮಾಡಲು ಬರುತ್ತಿಲ್ಲ ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದವರು ತಮ್ಮ ಸದಸ್ಯರಿಗೆ ಹರಿಹರ ಕೈಗಾರಿಕಾ ವಸಾಹತುವಿನಲ್ಲಿ 20 ಎಕರೆ ಜಮೀನು ನೀಡಬೇಕೆಂದು ಕೇಳಿದ್ದು ಸಭೆಯಲ್ಲಿ ಪ್ರಸ್ತಾಪವಾಯಿತು. ಅಂಗವಿಕಲರಿಗಾಗಿಯೇ ಶೇ.3 ರಷ್ಟು ನಿವೇಶನಗಳು ಮೀಸಲಾಗಿವೆ ಎಂದ ಜಿಲ್ಲಾಧಿಕಾರಿ ಬೀಳಗಿ, ಈ ನಿವೇಶನಗಳನ್ನು ಮಂಜೂರು ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರ ಮಲ್ಲಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಹೆಚ್.ಎಸ್. ಜಯಪ್ರಕಾಶ್ ನಾರಾಯಣ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್, ಕೆಐಎಡಿಬಿ ಅಧಿಕಾರಿ ಶ್ರೀಧರ್ ಮತ್ತಿತರರು ಪಾಲ್ಗೊಂಡಿದ್ದರು.