ವೈದ್ಯರಿಗೂ ಸಹ ಬೇಕಿದೆ ಇಂಜಿನಿಯರಿಂಗ್‌ ತಂತ್ರಜ್ಞಾನ

ಗ್ಯಾಡ್ಜೆಟ್‌ಗಳಿಂದ ರೋಬೋಗಳವರೆಗೆ ಹಲವಾರು ತಂತ್ರಜ್ಞಾನಗಳ ತಿಳುವಳಿಕೆ ವೈದ್ಯರಿಗೆ ಅಗತ್ಯ.

ಎಸ್.ಎಸ್.ಐ.ಎಂ.ಎಸ್.  ಪದವಿ ಪ್ರದಾನ ಸಮಾರಂಭದಲ್ಲಿ  ಡಾ. ಕರಿಸಿದ್ದಪ್ಪ

ದಾವಣಗೆರೆ, ಫೆ. 6 – ಅಂತರ್ಜಾಲದ ಮೂಲಕ ವೈದ್ಯಕೀಯ ಉಪಕರಣಗಳ ಬಳಕೆ, ಚಿಕಿತ್ಸೆಯಲ್ಲಿ ರೋಬೋಟ್‌ಗಳು, ಬಿಗ್ ಡಾಟಾ, ಧರಿಸಬಹುದಾದ ಗ್ಯಾಡ್ಜೆಟ್‌ಗಳು, 3ಡಿ ಬಯೋ ಪ್ರಿಂಟಿಂಗ್ ಸೇರಿದಂತೆ ಹತ್ತಾರು ತಂತ್ರಜ್ಞಾನಗಳು ವೈದ್ಯಕೀಯ ವಲಯದಲ್ಲಿ ಬಳಕೆಯಾಗುತ್ತಿದ್ದು, ಇವುಗಳನ್ನು ಸಶಕ್ತವಾಗಿ ಉಪಯೋಗಿಸಲು ವೈದ್ಯರು ಸಜ್ಜಾಗಬೇಕಿದೆ ಎಂದು ಬೆಳಗಾವಿಯ ವಿಶ್ವೇಶ್ವರಾಯ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಕರಿಸಿದ್ದಪ್ಪ ಕರೆ ನೀಡಿದ್ದಾರೆ.

ನಗರದ ಎಸ್.ಎಸ್.ಐ.ಎಂ.ಎಸ್. ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹತ್ತನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ರಕ್ತದೊಳಗೆ ಸಂಚರಿಸಿ ಚಿಕಿತ್ಸೆ ನೀಡುವ ಅತಿ ಸೂಕ್ಷ್ಮ ಗಾತ್ರದ ನ್ಯಾನೋ ರೋಬೋಗಳಿಂದ ಹಿಡಿದು, ಕೈಯಲ್ಲಿ ಧರಿಸುವ ಗ್ಯಾಡ್ಜೆಟ್‌ಗಳಂತಹ ಉಪಕರಣಗಳು ವೈದ್ಯರು ಚಿಕಿತ್ಸೆ ನೀಡಲು ನೆರವಾಗುತ್ತಿವೆ. ಇಂತಹ ಉಪಕರಣಗಳ ತಿಳುವಳಿಕೆ ಹೊಂದಿದರೆ ಉತ್ತಮ ವೈದ್ಯರಾಗಲು ಸಾಧ್ಯವಾಗುತ್ತದೆ ಎಂದರು.

ನೂತನ ಶಿಕ್ಷಣ ನೀತಿ ಸಹ ಈ ಅಗತ್ಯವನ್ನು ಪರಿಗಣಿಸಿದೆ. ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಎಂಬ ಭೇದ ಕಡಿಮೆಯಾಗಿ ಅಂತರಶಾಸ್ತ್ರೀಯ ಅಧ್ಯ ಯನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇಂಜಿನಿಯ ರಿಂಗ್‌ ವಿದ್ಯಾರ್ಥಿಗಳೂ ಈಗ ಜೀವಶಾಸ್ತ್ರ ಕಲಿಯಲಿ ದ್ದಾರೆ. ಅದರಂತೆ ವೈದ್ಯರೂ ಬಯೋ – ಮೆಕ್ಯಾನಿಕ್ಸ್ ತಿಳಿಯಬೇಕಿದೆ ಎಂದವರು ಅಭಿಪ್ರಾಯ ಪಟ್ಟರು.

ಹಿಂದಿನ ವೈದ್ಯರು ಚಿಕಿತ್ಸೆ ನಿರ್ಧರಿಸುವ ಸಂದರ್ಭದಲ್ಲಿ ಸ್ವಪ್ರಜ್ಞೆಯಿಂದ ನಿರ್ಧರಿಸುತ್ತಿದ್ದರು. ಆದರೆ, ಈಗ ರೋಗಿಯ ಕುರಿತ ಅಪಾರ ಮಾಹಿತಿಗಳು ಹಲವಾರು ಪರೀಕ್ಷೆಗಳ ಮೂಲಕ ಲಭ್ಯವಾಗುತ್ತಿವೆ. ಈ ಮಾಹಿತಿಯನ್ನು ವೈದ್ಯರು ಪರಿಶೀಲಿಸಿದಾಗ ಚಿಕಿತ್ಸೆಯ ಬಗ್ಗೆ ಇನ್ನೊಂದು ಒಳನೋಟ ಸಿಗಬಹುದು ಎಂದು ಕರಿಸಿದ್ದಪ್ಪ ತಿಳಿಸಿದರು.

ಇಂಟರ್‌ನೆಟ್‌ ಮೂಲಕ ನಿಯಂತ್ರಿಸಬಹುದಾದ ಉಪಕರಣಗಳು ವೈದ್ಯರಿಗೆ ಉಪಯುಕ್ತವಾಗಿವೆ. ಇದರಿಂದಾಗಿ ರೋಗಿಗಳ ಮೇಲೆ ವೈದ್ಯರು ನಿರಂತರ ನಿಗಾ ವಹಿಸಬಹುದು ಎಂದ ಅವರು, ಇದರಿಂದ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಾಗುತ್ತದೆ ಎಂದರು.

ಕೊರೊನಾ ಸಂದರ್ಭದಲ್ಲಿ ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಬೋಟ್‌ಗಳನ್ನು ಬಳಸಲಾಗಿತ್ತು. ಬ್ರಿಟನ್‌ನಲ್ಲಿ ಸೂಕ್ಷ್ಮ ರೋಬೋಗಳು ರಕ್ತ ನಾಳಗಳಲ್ಲಿ ಸಂಚರಿಸಿ ಆರೋಗ್ಯದ ಮೇಲೆ ನಿಗಾ ವಹಿಸುತ್ತವೆ. ಕ್ಯಾನ್ಸರ್‌ ರೀತಿಯ ರೋಗಗಳಿಗೆ ಸೂಕ್ಷ್ಮ ರೋಬೋಗಳು ನೆರವಾಗುತ್ತಿವೆ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಹಾಗೂ ಬಾಪೂಜಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ, ಎಂ.ಬಿ.ಬಿ.ಎಸ್. ಹಂತದಲ್ಲೇ ನಿಲ್ಲದೇ ವೈದ್ಯಕೀಯ ಸ್ನಾತಕೋತ್ತರ ಅಧ್ಯಯನಕ್ಕೆ ಮುಂದಾದರೆ ಬೇಡಿಕೆ ಸಿಗಲಿದೆ ಎಂದರು.

ಕಾಲೇಜು ಈ ಬಾರಿ ಐದು ರಾಂಕ್‌ ಪಡೆದಿದ್ದು, ಶೇ.87ರ ಫಲಿತಾಂಶ ಗಳಿಸಿದೆ. ಉತ್ತಮ ಉಪಕರಣಗಳು, ಪ್ರಯೋಗಾಲಯ ಹಾಗೂ ಅಧ್ಯಾಪಕರಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್ ಸ್ವಾಗತಿಸಿದರು. ವೇದಿಕೆಯ ಮೇಲೆ ಉಪ ಪ್ರಾಂಶುಪಾಲ ಡಾ. ಅರುಣ್ ಕುಮಾರ್ ಅಜ್ಜಪ್ಪ, ವೈದ್ಯಕೀಯ ನಿರ್ದೇಶಕ ಡಾ. ಎನ್.ಕೆ. ಕಾಶಪ್ಪನವರ್ ಉಪಸ್ಥಿತರಿದ್ದರು. ಸುನೀತ ಕಳಸೂರು ಮಠ ಹಾಗೂ ಆಶಾ ಬುಳ್ಳಪ್ಪ ನಿರೂಪಿಸಿದರು.

error: Content is protected !!