ಹರಿಹರ, ಜ.30- ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಇಲಾಖೆ, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ ಮತ್ತು ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮಕ್ಕೆ ಶಾಸಕ ಎಸ್. ರಾಮಪ್ಪ ಅವರು ಚಾಲನೆ ನೀಡಿದರು.
ಪೋಲಿಯೋ ಕಾಯಿಲೆಯು ಒಂದು ವೈರಸ್‍ನಿಂದ ಹರಡುವ ಕಾಯಿಲೆಯಾಗಿದ್ದು, ಇದರಿಂದ ಶಾಶ್ವತ ಅಂಗವಿಕಲತೆ ಉಂಟಾಗುತ್ತದೆ. ಇದರ ಪ್ರತಿಬಂಧಕವಾಗಿ ಲಸಿಕೆ ಕಂಡು ಹಿಡಿದು ಲಸಿಕೆ ಹಾಕಲಾಗುತ್ತಿದೆ. ಭಾರತದಲ್ಲಿ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿ ಈ ಕಾಯಿಲೆ ವಿರುದ್ಧ ಬಾಯಿ ಮೂಲಕ ಪೋಲಿಯೋ ಹನಿ ಹಾಕುವ ಲಸಿಕೆಯನ್ನು ಉಪಯೋಗಿಸಲಾಗುತ್ತಿದೆ. 5 ವರ್ಷದ ಒಳಗಿನ ಮಕ್ಕಳಿಗೆ ಬಾಯಿ ಮೂಲಕ ಎರಡು ಪೋಲಿಯೋ ಲಸಿಕೆ ಹಾಕಿಸುವುದರ ಮೂಲಕ ಈ ಕಾಯಿಲೆಯ ವಿರುದ್ಧ ಜಯ ಸಾಧಿಸೋಣ ಎಂದು ಶಾಸಕರು ಕರೆ ನೀಡಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, 1985 ರಿಂದ ಪೋಲಿಯೋ ನಿರ್ಮೂಲನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರೆ ಸದಸ್ಯ ರಾಷ್ಟ್ರಗಳು ಕಾರ್ಯಪ್ರವೃತ್ತರಾದರು. ಭಾರತವು 1995 ರಲ್ಲಿ ಪೋಲಿಯೋ ನಿರ್ಮೂಲನೆಗೆ ಕ್ರಮ ತೆಗೆದುಕೊಂಡಿತು. ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಸಾರ್ವತ್ರಿಕವಾಗಿ 0 ಯಿಂದ 5 ವರ್ಷದ ಮಕ್ಕಳಿಗೆ ಲಸಿಕೆ ಹಾಕುವುದು ಮತ್ತು ಪೋಲಿಯೋ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿ ಕಾಯಿಲೆಯನ್ನು ದೃಢಪಡಿಸಿ ಕೊಳ್ಳವುದು ಮುಖ್ಯವಾಗಿದೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರ ಮೋಹನ್ ಮಾತನಾಡಿ, ಭಾರತದಲ್ಲಿ ಈಗ ಸತತವಾಗಿ 14 ನೇ ವರ್ಷವೂ ಯಾವುದೇ ಪೋಲಿಯೋ ಪ್ರಕರಣ ಕಂಡುಬಂದಿರುವುದಿಲ್ಲ. 2014 ರ ಮಾರ್ಚ್ 27 ರಂದು ದಕ್ಷಿಣ ಏಷ್ಯಾ ವಲಯವನ್ನು ಪೋಲಿಯೋ ಮುಕ್ತ ಎಂದು ಘೋಷಿಸಲಾಗಿದೆ. ಆದರೂ ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ ರಾಷ್ಟ್ರಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಇರುವುರಿಂದ ನಮ್ಮ ದೇಶದ ಮಕ್ಕಳಿಗೆ ಪೋಲಿಯೋ ಕಾಯಿಲೆ ಬರುವ ಅಪಾಯವಿರು ವುದರಿಂದ ನಾವು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಾಗೂ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಮುಂದುವರೆಸಬೇಕಾಗಿದೆ ಎಂದು ತಿಳಿಸಿದರು.
ಜನವರಿ 30 ರಿಂದ ಫೆಬ್ರವರಿ 2021 ರವರೆಗೆ `ಕುಷ್ಟರೋಗದ ವಿರುದ್ಧ ಕೊನೆಯ ಯುದ್ಧ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ನಗರಸಭೆ ಪೌರಾಯುಕ್ತ ಉದಯಕುಮಾರ್, ನಗರಸಭೆ ಎಇಇ ಬಿರಾದಾರ, ಜಿಲ್ಲಾ ಆರೋಗ್ಯ ನೋಡಲ್ ಅಧಿಕಾರಿ ಡಾ.ನಟರಾಜ್, ಎಂ.ವಿ. ಹೊರಕೇರಿ, ಎಮ್. ಉಮ್ಮಣ್ಣ, ಎಸ್.ಎಚ್. ಪಾಟೀಲ್, ಡಾ.ವಿನುತಾ, ಕಾವ್ಯ, ವಿಶ್ವನಾಥ್, ಗಿರಿಜಾ, ಶಾಸಕರ ಆಪ್ತ ಸಹಾಯಕ ವಿಜಯ್ ಮಹಾಂತೇಶ್, ನಗರಸಭಾ ಸದಸ್ಯರಾದ ವಿರುಪಾಕ್ಷಪ್ಪ, ದಾದಾ ಖಲಂದರ್, ಅಶ್ವಿನಿ ಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.