ಮಲೇಬೆನ್ನೂರು, ಜ.27- ಗ್ರಾ.ಪಂ. ನೂತನ ಸದಸ್ಯರು ಗ್ರಾಮದ ಹಿತದೃಷ್ಟಿಯಿಂದ ಪಕ್ಷಾತೀತ, ಜಾತ್ಯತೀತವಾಗಿ ಒಗ್ಗಟ್ಟಿನಿಂದ ಇರಬೇಕೆಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕಿವಿಮಾತು ಹೇಳಿದರು.
ಬುಧವಾರ ರಾಜನಹಳ್ಳಿ ಗ್ರಾ.ಪಂ.ನ ನೂತನ ಸರ್ವ ಸದಸ್ಯರು ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡ ಸಂದರ್ಭ ದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಗ್ರಾ.ಪಂ. ಚುನಾವಣೆಗಳನ್ನು ಮಾಡದಂತೆ ಅವಿರೋಧವಾಗಿ ಆಯ್ಕೆ ಮಾಡಿ ಕೊಂಡರೆ ಬಹಳ ಒಳ್ಳೆಯದು. ಆದರೆ ಗ್ರಾಮ ದಲ್ಲಿ ನಿಮ್ಮ ನಿಮ್ಮ ನಡುವಿನ ವೈಮನಸ್ಸುಗಳಿಂ ದಾಗಿ ಜಿದ್ದಾಜಿದ್ದಿನ ಚುನಾವಣೆ ಮಾಡಿ ಗೆಲ್ಲು ತ್ತೀರಿ. ಗೆದ್ದ ನಂತರ ಆ ಜಿದ್ದನ್ನು ಬಿಟ್ಟು ಎಲ್ಲರೂ ಒಂದಾಗಿದ್ದರೆ ಮಾತ್ರ ಗ್ರಾಮದಲ್ಲಿ ಶಾಂತಿ, ಸಾಮರಸ್ಯ, ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಬರುವ ಫೆಬ್ರವರಿ 8 ಮತ್ತು 9 ರಂದು ಮಠದಲ್ಲಿ 3ನೇ ವರ್ಷದ ವಾಲ್ಮೀಕಿ ಜಾತ್ರೆ ಹಮ್ಮಿಕೊಂಡಿದ್ದು, ಈ ಬಾರಿ ವಿಶೇಷವಾಗಿ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಈ ವೇಳೆ ಹಾಜರಿದ್ದ ಜಿ.ಪಂ ಮಾಜಿ ಅಧ್ಯಕ್ಷ ವೈ. ರಾಮಪ್ಪ, ಜಿ.ಪಂ. ಮಾಜಿ ಸದಸ್ಯರೂ, ವಕೀಲರೂ ಆದ ಎಂ. ನಾಗೇಂದ್ರಪ್ಪ ವಾಲ್ಮೀಕಿ ಜಾತ್ರಾ ಸಮಿತಿ ಸಂಚಾಲಕರೂ, ಜೆಡಿಎಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷರೂ ಆದ ಹೊದಿಗೆರೆ ರಮೇಶ್ ಮಾತನಾಡಿದರು.
ರಾಜನಹಳ್ಳಿ ಗ್ರಾ.ಪಂ. ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿದ್ದು, ಎಸ್ಟಿಗೆ ಸೇರಿದ ಸದಸ್ಯರು ಚೈತ್ರ ಲಂಕೇಶ್ ಅವರು ಒಬ್ಬರೇ ಇರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತ ಎಂದು ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಎ.ಕೆ. ನಾಗೇಂದ್ರಪ್ಪ ಹೇಳಿದರು.
ಗ್ರಾಮದ ಮುಖಂಡರಾದ ಆರ್.ಟಿ. ಧನಂಜಯಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ನಿರ್ದೇಶಕ ವೈ. ಚಂದ್ರಶೇಖರ್, ಬಿ. ಭೀಮಪ್ಪ, ಎಲ್. ಹನುಮಂತಪ್ಪ, ಗ್ರಾ.ಪಂ ಸದಸ್ಯರಾದ ಪರಶುರಾಮಪ್ಪ, ಯಲ್ಲಪ್ಪ, ಜಯಪ್ಪ, ಹೇಮಾವತಿ, ಮಾರುತಿ, ಶಕುಂತ ಲಮ್ಮ, ಗೀತಾ ಚಂದ್ರಶೇಖರ್, ಗೀತಾ ಅಶೋಕ್ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು.