ಜಿ.ಎ ಜಗದೀಶ್ ಅವರು, 1985 ನೇ ಇಸವಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಪಾದಾರ್ಪಣೆ ಮಾಡಿ, ಅತ್ಯುತ್ತಮ ಕಾನೂನು ಶಾಂತಿ ಪಾಲನೆ ಸುವ್ಯವಸ್ಥೆ, ಅಪರಾಧ ಪತ್ತೆ ಮತ್ತು ತಡೆ, ಸುಗಮ ಸಂಚಾರ ಸುವ್ಯವಸ್ಥೆ, ಅತ್ಯುತ್ತಮ ಸಾರ್ವಜನಿಕ ಸಂಬಂಧ, ಹೀಗೆ ಸರ್ವತೋಮುಖವಾಗಿ ಸಾಧನೆಗೈದು ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು. 1999 ರಲ್ಲಿ ಉಡುಪಿಯ ವೃತ್ತದಲ್ಲಿ ಸಿಪಿಐ ಆಗಿದ್ದಾಗ ಶ್ಲಾಘನೀಯ ಸೇವೆಗಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.
ಜಗದೀಶ್ ಅವರು 2002 ರಿಂದ 2012 ರವರೆಗೆ ದಾವಣಗೆರೆ ನಗರ ಹಾಗೂ ಗ್ರಾಮಾಂತರ ವೃತ್ತದಲ್ಲಿ ಸುಮಾರು 10 ವರ್ಷಗಳ ಕಾಲ ಪೊಲೀಸ್ ವೃತ್ತಾಧಿಕಾರಿಯಾಗಿದ್ದರು. 2005 ರಲ್ಲಿ ದಾವಣಗೆರೆ ಕೇಂದ್ರ ವೃತ್ತದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪೊಲೀಸ್ ಇಲಾಖೆಯಲ್ಲಿ ವೃತ್ತಿಪರ ಕರ್ತವ್ಯ ಹಾಗೂ ಅಸಾಧಾರಣ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ ಪುರಸ್ಕೃತರಾಗಿದ್ದರು.
2013 – 2018 ರಲ್ಲಿ ಬೆಂಗಳೂರು ನಗರದಲ್ಲಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಆಗಿ ಸಂಚಾರ ವಿಭಾಗದಲ್ಲಿದ್ದ ಸಂದರ್ಭದಲ್ಲಿ 2018 ಜನವರಿ 26ರ ಗಣರಾಜ್ಯೋತ್ಸವದಂದು `ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕಕ್ಕೆ’ ಭಾಜನರಾಗಿದ್ದರು. ಜಗದೀಶ್ ಅವರು ಸಾಹಿತಿಗಳಾಗಿದ್ದು, ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಇವರ ಲೇಖನಗಳು ಹಾಗೂ ಕವನಗಳು ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸಾಹಿತ್ಯ ಕೃಷಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದ ವಿವಿಧ ಕವಿಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಿ, ವಿವಿಧ ಕಾವ್ಯ ವಾಚನ ಮಾಡಿದ್ದರು. ಜಗದೀಶ್ ಅವರು, `ಲಾಠಿ ಹಿಡಿಯುವ ಕೈ ಲೇಖನಿಯನ್ನೂ ಹಿಡಿಯಬಲ್ಲದು’ ಎಂಬುದನ್ನು ಸಾಬೀತು ಪಡಿಸಿದ್ದರು. ಕೋಟ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕಡಲತೀರದ ಭಾರ್ಗವ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟಾ ಶಿವರಾಮ ಕಾರಂತರ ನಿಕಟ ಸಂಪರ್ಕ ಹೊಂದಿದ್ದರು.
ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದ ಜಗದೀಶ್ ಅವರು ದಾವಣಗೆರೆ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ದಿನಾಂಕ 30-4-2019 ರಂದು ನಿವೃತ್ತಿ ಹೊಂದಿದ್ದರು.
ಜಿ.ಎ ಜಗದೀಶ್ ಅವರು ಬೆಂಗಳೂರು ರಾಜಭವನದಲ್ಲಿ ಕಳೆದ ವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯಿ ರೂಢಾಭಾಯಿ ವಾಲಾ ಅವರಿಂದ `ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ’ ಪಡೆದಿರುತ್ತಾರೆ. ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉಪಸ್ಥಿತರಿದ್ದರು.