ದೆಹಲಿ ಪರೇಡ್‌ : ಜಗಳೂರು ರೈತರ ಬೆಂಬಲ

ಜಗಳೂರು, ಜ.26- ದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ಪರೇಡ್‌ಗೆ ಬೆಂಬಲಿಸಿ ಕರ್ನಾಟಕ ರಾಜ್ಯರೈತ ಸಂಘ ಮತ್ತು ಹಸಿರುಸೇನೆ ಹಾಗೂ‌ ಪ್ರಗತಿಪರ ಸಂಘಟನೆಗಳ  ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಬೈಕ್, ಟ್ರ್ಯಾಕ್ಟರ್ ಹಾಗೂ ಕಾಲ್ನಡಿಗೆ ಜಾಥಾ ಪ್ರಮುಖ ಬೀದಿಗಳ ಮೂಲಕ ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ
ತಾಲ್ಲೂಕು ಕಛೇರಿಗೆ ತೆರಳಿ ತಹಶೀಲ್ದಾರ್  ಅವರಿಗೆ   ಮನವಿ ಸಲ್ಲಿಸಿದರು. 

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಚಿರಂಜೀವಿ ಸಿ.ಎಂ ಹೊಳೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಸುಗ್ರೀವಾಜ್ಞೆಗಳನ್ನು ರದ್ದುಪಡಿಸಬೇಕು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಜಾರಿಗೊಳಿಸಬೇಕು, ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಧಾನ್ಯ ಖರೀದಿಸುವವರ ಪರವಾನಿಗೆ ರದ್ದುಪಡಿಸಿ ಅಂತಹವರ ವಿರುದ್ಧ  ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಖಾಸಗೀಕರಣ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು. 

ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ ದೇಶದಲ್ಲಿ 58 ದಿನಗಳ ಕಾಲ ಕೊರೆಯುವ ಚಳಿಯಲ್ಲಿ ನ್ಯಾಯಯುತ ಬೇಡಿಕೆಗೆ ಹೊರಾಟ ನಿರತರಾಗಿ 70 ಕ್ಕೂ ಅಧಿಕ ರೈತರು ಪ್ರಾಣ ಕಳೆದುಕೊಂಡರೂ ಕೇಂದ್ರ ಸರ್ಕಾರ  ಸ್ಪಂದಿಸಿಲ್ಲ   ಎಂದು ಆರೋಪಿಸಿದರು. 

ಈ ಸಂದರ್ಭದಲ್ಲಿ ಎಐಟಿಯುಸಿ ತಾಲ್ಲೂಕು ಕಾರ್ಯದರ್ಶಿ ಮಹಮ್ಮದ್ ಬಾಷಾ, ಭಿಮ್ ಆರ್ಮಿ ಸಂಘಟನೆ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಡಿಎಸ್ ಎಸ್ ತಾಲ್ಲೂಕು ಅಧ್ಯಕ್ಷ ಸತೀಶ್ ಮಲೆಮಾಚಿಕೆರೆ, ಪ್ರಗತಿಪರ ಒಕ್ಕೂಟದ ಧನ್ಯಕುಮಾರ್, ಎಂ.ರಾಜಪ್ಪ, ಮಾದಿಹಳ್ಳಿ ಮಂಜುನಾಥ್, ವೀರಣ್ಣ, ತಿಪ್ಪೇಸ್ವಾಮಿ, ಸ್ವಾಮಿ, ರೈತ ಸಂಘಟನೆಯ ಪದಾಧಿಕಾರಿಗಳಾದ   ಲೊಕೇಶ್, ಸತೀಶ್, ಶರಣಪ್ಪ, ರಾಜು, ಪ್ರಹ್ಲಾದಪ್ಪ, ನಾಗರಾಜ್, ಸುಧಾ, ಮಂಜಮ್ಮ, ಅನಿತಾ, ದಂಡ್ಯಮ್ಮ, ರಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!