ಭಾಷೆ, ಸಾಹಿತ್ಯ ಉಳಿಸಲು ಯುವ ಜನತೆ ಮುಂದಾಗಬೇಕು

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಆಶಯ

ದಾವಣಗೆರೆ, ಜ. 24- ಪ್ರತಿಯೊಬ್ಬರೂ ಸಾಹಿತ್ಯಾಭಿಮಾನಿಗಳಾಗಬೇಕು. ಅದರಲ್ಲೂ ಯುವ ಜನತೆ ಕನ್ನಡ ಭಾಷೆ, ನಾಡು, ನುಡಿ, ಸಾಹಿತ್ಯವನ್ನು ಉಳಿಸಿ, ಬೆಳೆಸಲು ಮುಂದಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಕರೆ ನೀಡಿದರು.

ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಮಕರ ಸಂಕ್ರಮಣ, ಕಲಾಕುಂಚ 31ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಪಂಪ, ರನ್ನ, ಜನ್ನರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಭಾಷೆಯನ್ನು ಮತ್ತಷ್ಟು ಕಟ್ಟಿ ಬೆಳೆಸಿದ್ದಾರೆ. ಕುವೆಂಪು, ದ.ರಾ. ಬೇಂದ್ರೆ ಮುಂತಾದ ಕವಿಗಳು ನಾಡು ನುಡಿಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಆದರೆ ಇಂದಿನ ಯುವ ಜನಾಂಗ ವಾಣಿಜ್ಯೀಕರಣದ  ಭರಾಟೆಯಲ್ಲಿ ಸಾಂಸ್ಕೃತಿಕವಾಗಿ ಬೆರೆಯು ವುದರಿಂದ ವಂಚಿತವಾಗುತ್ತಿದೆ. ಇಂತಹ ಕವಿಗೋಷ್ಠಿಗಳು ಭಾಷೆ, ಸಾಹಿತ್ಯದ ಬೆಳವಣಿ ಗೆಗೆ ಪೂರಕವಾಗಿವೆ ಎಂದು ಹೇಳಿದರು.

ಕನ್ನಡ ಭಾಷೆಗೆ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ದೊರೆತಿರುವುದು ನಮ್ಮೆಲ್ಲರ ಹೆಮ್ಮೆ, ಸಮಾಜ, ಸಮುದಾಯ ಹಣ ಗಳಿಕೆಯ ಹಿಂದೆ ಬಿದ್ದಿರುವ ಸಂದಿಗ್ಧ ಸಂದರ್ಭದಲ್ಲಿ ಸಾಹಿತ್ಯದ ಚಿಂತನೆಗಳು ಹೆಚ್ಚಾಗಿ ನಡೆಯಬೇಕು ಎಂದು ಪ್ರತಿಪಾದಿಸಿದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆಗಳು ಕಡಿಮೆ. ಅವರೆಲ್ಲಾ ಕಾಯಕ ತತ್ವ ಪ್ರತಿಪಾದಿಸುತ್ತಾರೆ. ಆದರೆ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ ಮಾತುಗಳನ್ನು ಎಲ್ಲರೂ ಪಾಲಿಸಿದಲ್ಲಿ, ನಮ್ಮ ದೇಶದಲ್ಲಿಯೂ ಅಸಮಾನತೆ ಮುಕ್ತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಮಾನತೆ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯಿಸಿದರು.

ಪ್ರತಿಯೊಬ್ಬರಲ್ಲೂ ಜ್ಞಾನದ ಸಾಮ್ರಾಜ್ಯ ಬೆಳೆಯಬೇಕೆಂಬುದು ಮಹಾಕವಿ ಕುವೆಂಪು ಅವರ ಆಶಯವಾಗಿತ್ತು. ಆದರೆ ಇಂದು ಎಲ್ಲರೂ ಹಣದ ಸಾಮ್ರಾಜ್ಯ ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಹಣದಾಸೆಗೆ ಮಾತೃಭಾಷೆಯನ್ನು ಕಡೆಗಣಿಸಿ ಇಂಗ್ಲಿಷ್ ವ್ಯಾಮೋಹ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕನ್ನಡ ನಮ್ಮ ತಾಯಿ  ಭಾಷೆಯಾಗಿದ್ದು, ಮೊದಲ ಆದ್ಯತೆ ನೀಡಬೇಕು. ಅದರೊಟ್ಟಿಗೆ ಇತರೆ  ಭಾಷೆಯನ್ನೂ ಕಲಿಯಬೇಕು ಎಂದು ಕಿವಿ ಮಾತು ಹೇಳಿದರು.

ಯುವ ಜನತೆ ಕೌಶಲ್ಯಗಳನ್ನು ರೂಢಿಸಿಕೊಂಡರೆ ದೇಶ ಪ್ರಗತಿಯತ್ತ ಸಾಗಲು ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅದರಂತೆ ಯುವ ಜನತೆ ಕೌಶಲ್ಯ ಬೆಳೆಸಿಕೊಳ್ಳಬೇಕು. ಯಾವುದೇ ಕೆಲಸ ಮಾಡಲಿ, ಶ್ರದ್ಧೆ, ನಿಷ್ಠೆ ಇಟ್ಟುಕೊಂಡಿರಬೇಕು ಎಂದು ಕಿವಿ ಮಾತು ಹೇಳಿದರು.

ಕಾರವಾರ ಜಿಲ್ಲೆಯ ಯಕ್ಷಗಾನ ಕಲಾವಿದರೂ, ಹಿರಿಯ ಕವಿಗಳೂ ಆದ ನಾಗೇಶ್ ಅಣ್ವೇಕರ್ ಅಧ್ಯಕ್ಷತೆ ವಹಿಸಿದ್ದರು. ಹಾಸನ ಜಿಲ್ಲೆಯ ಹಿರಿಯ ಕವಯತ್ರಿ ಪದ್ಮಾಮೂರ್ತಿ, ವಿಜಯಪುರ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕರಾದ ಗಿರಿಜಾ ಮಾಲಿ ಪಾಟೀಲ್, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಹರಿಹರದ ಹಿರಿಯ ಕವಿ ಸುಬ್ರಮಣ್ಯ ನಾಡಿಗೇರ್,  ಹಿರಿಯೂರು ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಈ ರವೀಶ, ವಿಜಯನಗರ ಜಿಲ್ಲೆಯ ಯುವ ಕವಿ ಸೋಮನಾಥ ಸಾಲಿಮಠ, ಸಾಹಿತಿ ಎನ್.ಟಿ. ಯರಿಸ್ವಾಮಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಹೆಚ್. ಮಂಜುನಾಥ್ ಉಪಸ್ಥಿತರಿದ್ದರು. 

ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!