ಅಧಿಕಾರಿಗಳು ಒತ್ತಡಕ್ಕೆ ಮಣಿಯದೇ, ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು

ಹರಪನಹಳ್ಳಿ ನ್ಯಾಯಮೂರ್ತಿ ಉಂಡಿ ಮಂಜುಳಾ ಶಿವಪ್ಪ ಕರೆ

ಹರಪನಹಳ್ಳಿ, ಜ.22- ಸರ್ಕಾರಿ ಅಧಿಕಾರಿಗಳು  ಯಾವುದೇ ಒತ್ತಡಕ್ಕೆ ಮಣಿಯದೆ  ನಿಷ್ಟೆಯಿಂದ  ಕೆಲಸ ನಿರ್ವಹಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ  ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

ಪಟ್ಟಣದ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ತಾಲ್ಲೂಕಿನ ಪಿಡಿಓ, ಕೃಷಿ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ರೈತರು ತಮ್ಮ ಕಣಗಳಲ್ಲಿ ಒಕ್ಕಲುತನ ಮಾಡುವುದನ್ನು ಬಿಟ್ಟು ಸಾರ್ವಜನಿಕರು ಓಡಾಡುವ ರಸ್ತೆ ಮಧ್ಯೆ ರಾಗಿ, ತೊಗರಿ ಇತರೆ ಬೆಳೆಕಾಳುಗಳನ್ನು ರಸ್ತೆಗೆ ಹಾಕುತ್ತಿದ್ದಾರೆ. ಇಂತಹ ರೈತರಿಗೆ ತಾಲ್ಲೂಕಿನ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ಅಧಿನಿಯಮದಲ್ಲಿ ರೈತರಿಗೆ ಕಣ ನೀಡಲು ಅವಕಾಶ ಇದ್ದರೆ ನೀಡಬೇಕು.  

ಈ ಹಿಂದೆ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಎಲ್ಲೆಡೆ ತೊಗರಿ, ರಾಗಿ ಇತ್ಯಾದಿ ಬೆಳೆಗಳನ್ನು ತೆರವುಗೊಳಿಸಲಾಗಿತ್ತು. ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ತಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೈತರಿಗೆ ಬುದ್ಧಿ ಹೇಳಿ ರಸ್ತೆಗೆ ಹಾಕುವುದನ್ನು ತಡೆಗಟ್ಟಬೇಕು ಎಂದರು.

ಅಧಿಕಾರಿಗಳು ರೈತರನ್ನು ಗೌರವಿಸಿ, ಅವರಿಗೆ ಕಾನೂನು ಬಗ್ಗೆ ತಿಳುವಳಿಕೆ ಹೇಳಿ. ಸರ್ಕಾರದ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ. ಅವರಿಗೆ ಸರ್ಕಾರದಿಂದ ಕಣಗಳನ್ನು ನಿರ್ಮಿಸಿಕೊಡಿ. ಪೊಲೀಸ್ ಠಾಣೆಯ ಅಧಿಕಾರಿಗಳೂ ಸಹ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಎಂದರು. 

ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರೇಗೌಡ, ತಹಶೀಲ್ದಾರ್ ನಂದೀಶ್, ಸಹಾಯಕ ಕೃಷಿನಿರ್ದೇಶಕ  ಮಂಜುನಾಥ್ ಗೊಂದಿ,  ಇಓ. ಬಿ.ಎಲ್. ಈಶ್ವರ ಪ್ರಸಾದ್, ವಕೀಲರುಗಳಾದ ಕೆ. ಪ್ರಕಾಶ, ಪಿ. ರಾಮನಗೌಡ ಪಾಟೀಲ್. ರೇವನಗೌಡ್ರು, ಕೆ. ಬಸವರಾಜ್, ಎಸ್.ಎಂ. ರುದ್ರಮನಿ, ಗೋಣಿಬಸಪ್ಪ,  ಮಂಜ್ಯಾನಾಯ್ಕ್, ಸಿದ್ದೇಶ್, ಎಂ. ಆನಂದ, ಓ. ತಿರುಪತಿ,  ಮುತ್ತಿಗಿ ಮಂಜುನಾಥ ಉಪಸ್ಥಿತರಿದ್ದರು.

error: Content is protected !!