ಸವಿತಾ ಸಮಾಜದ ಮೀಸಲಾತಿಯನ್ನು ಪರಾಮರ್ಶಿಸಿ, ಹೊಸ ಮೀಸಲಾತಿಯನ್ನು ಸೌಲಭ್ಯ ಕಲ್ಪಿಸಲು ಆಗ್ರಹ

ಚಿತ್ರದುರ್ಗ, ಜ. 20- ಶೋಷಣೆಗೆ ಒಳಗಾಗಿರುವ ತಳ ಸಮುದಾಯ ಸವಿತಾ ಸಮಾಜಕ್ಕೆ ಈಗಿನ ಮೀಸಲಾತಿಯಿಂದ ಯಾವ ಸೌಲಭ್ಯಗಳು ದೊರಕುತ್ತಿಲ್ಲ.  ಸಮಾಜಕ್ಕೆ ಅನ್ಯಾಯವಾಗುತ್ತಿದೆ.  ಆದ್ದರಿಂದ ಸವಿತಾ ಸಮಾಜಕ್ಕೆ ನೀಡಿರುವ ಮೀಸಲಾತಿಯನ್ನು ಪರಾಮರ್ಶಿಸಿ, ಹೊಸ ಮೀಸಲಾತಿ ಸೌಲಭ್ಯ ನೀಡುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಸರ್ಕಾರ ಕಾರಣವಾಗಬೇಕೆಂದು ಶ್ರೀ ಸವಿತಾ ಪೀಠದ ಶ್ರೀಗಳಾದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದ ಎಸ್.ಎಸ್.ಕೆ.ಎಸ್. ಕಲ್ಯಾಣ ಮಂಟಪದಲ್ಲಿ ನಿನ್ನೆ ಜರುಗಿದ ಸವಿತಾ ಸಮಾಜದ ರಾಜ್ಯ ಮಟ್ಟದ ಮೀಸಲಾತಿ ಚಿಂತನಾ ಸಭೆಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಹಿರಿಯರಾದ ಪ್ರೊ.ಎನ್.ವಿ.ನರಸಿಂಹಯ್ಯ ವಹಿಸಿ ಮಾತನಾಡಿ, ಸವಿತಾ ಸಮಾಜಕ್ಕೆ ನಾಲ್ಕೈದು ದಶಕಗಳಿಂದಲೂ ಸಮರ್ಪಕವಾದ ಮೀಸಲಾತಿ ಲಭ್ಯವಾಗಿಲ್ಲ. 1979-80ರ ಸಾಲಿನಲ್ಲಿ ಸವಿತಾ ಸಮಾಜಕ್ಕೆ ಮೀಸಲಾತಿಯನ್ನೇ ನೀಡಿರಲಿಲ್ಲ. ಈ ಮೂಲಕ ಸಮಾಜವನ್ನು ವಂಚಿಸಲಾಗಿತ್ತು. ಕೊನೆಗೆ ನ್ಯಾಯಾಲಯದ ಸೂಚನೆ ಮೇರೆಗೆ ಹಿಂದುಳಿದ ವರ್ಗಗಳ ಗುಂಪಿಗೆ ಸವಿತಾ ಸಮಾಜವನ್ನು ಸೇರ್ಪಡೆ ಮಾಡಲಾಯಿತು. ಆದರೂ ಸಹಾ ಸಮಾಜಕ್ಕೆ ನ್ಯಾಯ ದೊರಕಿಲ್ಲ. ಹಿಂದುಳಿದ ವರ್ಗ 2ಎ ಬದಲಿಗೆ 3ಸಿ ನಿರ್ಮಿಸಿ, ವಿಶೇಷ ಮೀಸಲಾತಿ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟರು. 

ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಪ್ರಸ್ತುತ ಬಿಸಿಎಂ 2ಎ ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿಯಿಂದ ಸಮಾಜಕ್ಕೆ ಇದುವರೆಗೂ ಯಾವ ಪ್ರಯೋಜನವೂ ದೊರಕಿಲ್ಲ.ಬಲಾಢ್ಯ ಕೋಮುಗಳು ಈ ಮೀಸಲಾತಿ ಅಡಿ ಬರುವುದರಿಂದ ಸೌಲಭ್ಯಗಳನ್ನು ಬೇರೆಯವರು ಕಬಳಿಸುತ್ತಿದ್ದಾರೆ. ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಪಡೆಯಲು ಅಸಾಧ್ಯವಾಗಿದೆ.

– ಶ್ರೀ ಶ್ರೀಧರಾನಂದ  ಸರಸ್ವತಿ ಸ್ವಾಮೀಜಿ,  ಪೀಠಾಧ್ಯಕ್ಷರು, ಶ್ರೀ ಸವಿತಾ ಸಮಾಜ

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸವಿತಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಶ್  ಮಾತನಾಡಿ,  ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಮೀಸಲಾತಿಯಲ್ಲಿ ನ್ಯಾಯ ದೊರೆಯಲಿದ್ದು, ಇದಕ್ಕಾಗಿ ತಾವು ಎಲ್ಲಾ ರೀತಿಯ ನೆರವು ಕಲ್ಪಿಸಲಾಗುವುದು ತಿಳಿಸಿದರು. 

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ನಗರಸಭಾ ಸದಸ್ಯ ಹಾಗೂ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಚಂದ್ರಶೇಖರ್ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಶ್ರೀ ಸವಿತಾ ಪೀಠದ ಶಾಖಾ ಮಠ ಸ್ಥಾಪನೆಗೆ ಎರಡು ಎಕರೆ ಭೂಮಿ ನೀಡುವುದಾಗಿ ಘೋಷಿಸಿದರು. ಸವಿತಾ ಸಮಾಜ ಹೋರಾಟ ಸಮಿತಿ ಸಂಚಾಲಕ ಟಿ.ತಿಪ್ಪೇಸ್ವಾಮಿ ಸಂಪಿಗೆ ಆಶಯ ನುಡಿಗಳನ್ನು ನುಡಿಗಳನ್ನಾಡಿದರು. 

ಚಿಂತನಾ ಸಭೆಯಲ್ಲಿ ಪ್ರಮುಖವಾಗಿ ಎರಡು ನಿರ್ಣಯಗಳನ್ನು ಕೈಗೊಳ್ಳಲಾಯಿತು.  ಸಮಾಜದ ಸಂಘಟನೆ ಹಾಗೂ ಮೀಸಲಾತಿ ಸೌಲಭ್ಯ ಪಡೆಯಲು ತಜ್ಞರ ವರದಿ ಪಡೆಯಲು ಶ್ರೀಗಳಿಗೆ ಅಧಿಕಾರ ನೀಡಲಾಯಿತು.  

ಸವಿತಾ ಸಮಾಜದ ನಿಕಟಪೂರ್ವ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಸವಿತಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ವಿಜಯ ಭಾಸ್ಕರ್, ಧರ್ಮರಾಜ್, ರಾಜ್ಯ ಸವಿತಾ ಸಮಾಜದ ನಿರ್ದೇಶಕರಾದ ಬಿ.ಟಿ.ಆನಂದ, ನಂದಗುಡಿ ನಾಗರಾಜ್, ಚಲಪತಿ ಮುಖಂಡರಾದ ವೆಂಕಟಾಚಲಪತಿ, ನಾಗರಾಜ್ (ಆಟೋ) ಪಲ್ಲವಿ ಪ್ರಸನ್ನ, ಘನಶ್ಯಾಂ, ಸಂತೋಷ, ರಂಜಿತ್ ಕುಮಾರ್ ಉಪಸ್ಥಿತರಿದ್ದರು. 

ಜ್ಯೋತಿ ಪ್ರಸನ್ನ ಪ್ರಾರ್ಥಿಸಿದರು. ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ಸ್ವಾಗತಿಸಿದರು. ಶಿಕ್ಷಕ ಗುರುಸ್ವಾಮಿ ನಿರೂಪಿಸಿದರು.  ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ವಂದಿಸಿದರು.

error: Content is protected !!