ಗಣತಿ ಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ತಕ್ಷಣವೇ ಸೇರ್ಪಡೆ ಮಾಡಿ, ಅವರಿಗೂ ನೆರವು ನೀಡಬೇಕು. ದೇವದಾಸಿ ಮಹಿಳೆಯರ ಮಕ್ಕಳು ಪರಸ್ಪರ ವಿವಾಹವಾದಾಗಲೂ ಪ್ರೋತ್ಸಾಹ ಧನ ನೀಡಬೇಕು.
ಹರಪನಹಳ್ಳಿ, ಜ.19 – ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲ್ಲೂಕು ಘಟಕದ ಆಶ್ರಯದಲ್ಲಿ ದೇವದಾಸಿಯರು ಪಟ್ಟಣ ದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿ ಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲು ಯತ್ನಿಸುತ್ತಿರುವ ಕಾರ್ಪೊರೇಟ್ ಕಂಪನಿಗಳ ಪರವಾದ ಕಾಯ್ದೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ರಾಜ್ಯ ಸರ್ಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ವಾಪಸ್ ಪಡೆಯಬೇಕು.
ದೇವದಾಸಿ ಮಹಿಳೆಯರಿಗೆ ನೀಡುವ ಮಾಸಿಕ ಸಹಾಯಧನವನ್ನು ಈ ಬಜೆಟ್ ನಲ್ಲಿ ಕನಿಷ್ಠ 3 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು, ಅದೇ ರೀತಿ ನೆರವು ನೀಡಲಿರುವ ಮಹಿಳೆಯರ ವಯೋಮಿತಿ ಷರತ್ತನ್ನು ತೆಗೆದು ಹಾಕಬೇಕು.
ದೇವದಾಸಿ ಮಹಿಳೆಯರಿಗೆ ನೀಡುವ ಭೂಮಿಯ ಮಿತಿಯನ್ನು ಎರಡು ಎಕರೆ ಯಿಂದ ಕನಿಷ್ಠ ಐದು ಎಕರೆ ನೀರಾವರಿ ಜಮೀನು ದೊರೆಯುವಂತೆ ಹೆಚ್ಚಿಸಬೇಕು, ಪ್ರತಿ ವರ್ಷ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 100 ಫಲಾನುಭವಿಗಳಿಗೆ ಜಮೀನು ದೊರೆಯುವಂತೆ ಅಗತ್ಯ ಬಜೆಟ್ ಒದಗಿಸಬೇಕು.
ದೇವದಾಸಿ ಪುನರ್ವಸತಿ ಯೋಜನೆಯಲ್ಲಿನ ಮಹಾ ಭ್ರಷ್ಟಾಚಾರ ತಪ್ಪಿಸಲು ಫಲಾನುಭವಿಗಳ ಆಯ್ಕೆಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಮಾಡಬೇಕು, ಅದೇ ರೀತಿ ನೇರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ನೆರವು ನೀಡಲು ಕ್ರಮ ವಹಿಸಬೇಕು, ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಜಿಲ್ಲಾ ಹಾಗೂ ತಾಲ್ಲೂಕು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರಕಟಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷರಾದ ಟಿ.ವಿ.ರೇಣುಕಮ್ಮ, ಉಪಾಧ್ಯಕ್ಷೆ ಸಣ್ಣ ಕೆಂಚಮ್ಮ, ತಾಲ್ಲೂಕು ಅಧ್ಯಕ್ಷೆ ಎಸ್ .ರೇಣುಕಾ, ಕಾರ್ಯದರ್ಶಿ ಎ.ಮುತ್ತಮ್ಮ, ಈರಮ್ಮ, ಕೆಂಚಮ್ಮ, ಹೂವಕ್ಕ, ಹನುಮಕ್ಕ, ಹುಲಿಕಟ್ಟಿ ರಾಜಪ್ಪ, ಹುಲಿಕಟ್ಟಿ ರೆಹಮತ್ ಸೇರಿದಂತೆ ನೂರಾರು ದೇವದಾಸಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.