ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಚಲಾಯಿಸಿ: ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ

ಹರಪನಹಳ್ಳಿ, ಜ.19 – ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಕಾನೂನಿನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು, ಸಾರ್ವಜನಿಕರು ಚಾಚೂ ತಪ್ಪದೇ ಕಾನೂನಿನ ನಿಯಮಗಳನ್ನು ಪಾಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 32ನೇ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಸಡಕ್ ಸುರಕ್ಷ-ಜೀವನ್ ರಕ್ಷ ಕಡ್ಡಾಯ ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳಿ ಅಭಿಯಾನದ ಮೂಲಕ ಪೊಲೀಸ್ ಬೈಕ್ ರಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು, ತಾಲ್ಲೂಕಿನ ಸಾರ್ವಜನಿಕ ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಕಾನೂನು ಬದ್ದವಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಬಿಡಬೇಕು ಯಾರು ಕೂಡ ಇಂತಹ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ವಾಹನ ಸವಾರರು ಚಾಚೂ ತಪ್ಪದೇ ಆರ್.ಟಿ.ಓ. ಅಧಿಕಾರಿಗಳಿಂದ ಪರವಾನಿಗೆ ಪಡೆದುಕೊಂಡು ವಾಹನ ಚಾಲಿಸಬೇಕು. ಯಾರು ಕೂಡ ಕಾನೂನು ಬಾಹಿರವಾಗಿ ವಾಹನಗಳನ್ನು ಚಲಾಯಿಸಬಾರದು. ಅಪ್ರಾಪ್ತ ವಯಸ್ಕರು ಯಾರಾದರು ವಾಹನ ಚಲಾಯಿಸಿದರೆ ಅವರ ತಂದೆ-ತಾಯಿಗಳ ವಿರುದ್ಧ ಪ್ರಕರಣ ದಾಖಲಿಸಿ ಎಂದರು, 

ಡಿವೈಎಸ್ಪಿ ಹಾಲಮೂರ್ತಿರಾವ್ ಮಾತನಾಡಿ, ವಾಹನ ಸವಾರರು ಯಾವ ರೀತಿ ವಾಹನ ಚಲಾಯಿಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲದೆ ವಾಹನ ಚಲಾಯಿಸುತ್ತಾರೆ. ಇನ್ನು ಮುಂದೆ ವಾಹನ ಸವಾರರು ಕಡ್ಡಾಯವಾಗಿ ವಾಹನದ ಪರವಾನಿಗೆ ಪಡೆದುಕೊಂಡು, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ನಿಯಮಾನುಸಾರವಾಗಿ ವಾಹನ ಚಲಾಯಿಸಬೇಕು ಎಂದರು.

ವಾಹನ ಸವಾರರ ಪರವಾಗಿ ಯಾವುದೇ ಮುಖಂಡರು ಬಂದು ಮನವಿ ಮಾಡಿಕೊಳ್ಳುವ ಬದಲಿಗೆ ವಾಹನ ಸವಾರರಿಗೆ ಬುದ್ದಿ ಹೇಳಿ ಇನ್ನು ಮುಂದೆ ಈ ರೀತಿ ತಪ್ಪು  ಮಾಡಬೇಡ. ನೀನು ಹೋಗಿ ನಿನ್ನ ವಾಹನದ ಪರವಾನಿಗೆ ಪಡೆದುಕೊಂಡು ವಾಹನ ಚಲಾಯಿಸು ಎಂದು ವಾಹನ ಸವಾರರಿಗೆ ಬುದ್ದಿ ಹೇಳಬೇಕು ಎಂದು ಸಾರ್ವಜನಿಕ ಮುಖಂಡರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿಪಿಐ ಕೆ. ಕುಮಾರ್, ಪಿಎಸ್‍ಐ ಸಿ. ಪ್ರಕಾಶ್, ಅರಸಿಕೇರಿ ಪಿಎಸ್‍ಐ ಕಿರಣ್ , ವಕೀಲರುಗಳಾದ ಎಂ.ಮೃತ್ಯುಂಜಯ, ಮಂಜ್ಯಾನಾಯ್ಕ್, ಶಾಂತವೀರ್ ನಾಯ್ಕ್, ರವಿಶಂಕರ್, ಪೊಲೀಸ್ ಸಿಬ್ಬಂದಿಗಳಾದ ಕೊಟ್ರೇಶ್, ದಾದಾಪುರ ರವಿ, ವಾಸುದೇವನಾಯ್ಕ್, ಮಂಜುನಾಥ್ ಮತ್ತು ಇತರರು ಇದ್ದರು.

error: Content is protected !!