ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಡಿಮೆ ಕೂಲಿ

ಹರಪನಹಳ್ಳಿ, ಜ.16 – ತಾಲ್ಲೂಕಿನ ಅರಸನಾಳು ಗ್ರಾಮದ 300ಕ್ಕು ಹೆಚ್ಚು ಕಾರ್ಮಿಕರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗೆ ಸಂಬಂಧ ಪಟ್ಟಂತೆ ನಿಗದಿತ ಕ್ಕಿಂತ ಕಡಿಮೆ ಕೂಲಿ ಹಣವನ್ನು ನೀಡುತ್ತಾರೆ ಎಂದು ಆರೋಪಿಸಿ ಕೂಲಿ ಕಾರ್ಮಿಕರು ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕೂಲಿ ಕೆಲಸದ ಸಾಮಗ್ರಿ, ಬುತ್ತಿ ಸಮೇತ ಆಗಮಿಸಿದ್ದ ಕೂಲಿ ಕಾರ್ಮಿಕರು, ಆವರಣದ ಲ್ಲಿಯೇ ಬೆಳಗ್ಗೆ ಊಟವನ್ನು ಸವಿದರು. ಗ್ರಾಮದ ಕೆರೆಯಂಗಳದಲ್ಲಿ ಕೆಲಸ ಮಾಡುತ್ತಿರುವ ನಮಗೆ ಮಹಾತ್ಮಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕೂಲಿ ರೂ.284 ಹಣವನ್ನು ಪಾವತಿ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. 

ಗ್ರಾಮೀಣ ಕೂಲಿಕಾರರ ಸಂಘಟನೆ (ಗ್ರಾಕೋಸ್) ಸಂಚಾಲಕ ಕೋಗಳಿ ಮಲ್ಲೇಶ್ ಮಾತನಾಡಿ, ಗ್ರಾಮದ ನೂರಾರು ಕಾರ್ಮಿಕರು ಕೆರೆಯಂಗಳದಲ್ಲಿ ಬಿಸಿಲು, ಚಳಿ ಎನ್ನದೇ ಮಣ್ಣು ಕಡಿದು ಮಣ್ಣು ಹೊತ್ತು ಹಾಕಿದ್ದೇವೆ. ಆದರೆ ಇಲ್ಲಿನ ಎಂಜಿನಿಯರ್ ಹರ್ಷ ಅವರು, ಉದ್ದೇಶ ಪೂರ್ವಕವಾಗಿ ಕೆಲಸ ಪೂರ್ತಿ ಮಾಡದೇ, ದಿನವೊಂದಕ್ಕೆ ಕೇವಲ ರೂ.160 ಅಳತೆ ಪ್ರಮಾಣ ಬರೆದು ಕೂಲಿ ಕಾರ್ಮಿಕರನ್ನು ವಂಚಿಸಿದ್ದಾರೆ ಎಂದು ದೂರಿದರು. 

ಯೋಜನೆಯಡಿ ಬಾಡಿಗೆ ಪಡೆದಿರುವ ಟ್ರ್ಯಾಕ್ಟರ್‍ಗೆ 2 ವರ್ಷಗಳಿಂದ ಬಾಡಿಗೆ ಹಣ ಪಾವತಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಕೆರೆಯಂಗಳದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕುಡಿಯುವ ನೀರು, ಆರೋಗ್ಯ ಕಿಟ್‍ಗಳನ್ನು ಒದಗಿಸದೇ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ತಿಮ್ಮನಾಯ್ಕ ಅವರು, ಕಾರ್ಮಿಕರೊಂದಿಗೆ ಸರಿಯಾಗಿ ವರ್ತನೆ ಮಾಡುತ್ತಿಲ್ಲ. ಕಾರ್ಮಿಕರು ಕೂಲಿ ಹಣ ಕೇಳಿದರೆ, ಅಳತೆ ಮಾಡುವಾಗ ಎಂಜಿನಿಯರ್ ಜೊತೆ ಸೇರಿಕೊಂಡು ಕಡಿಮೆ ಪ್ರಮಾಣ ತೋರಿಸಿದ್ದಾರೆ. ಕೆಲಸ ಮಾಡಿಸುವಾಗ ವಯಸ್ಕರು, ವೃದ್ಧರನ್ನು ಹೊಂದಾಣಿಕೆ ಗುಂಪು ತಯಾರಿಸದೇ, ಬೇಕಾಬಿಟ್ಟಿ ಕೆಲಸ ಕೊಡುತ್ತಿದ್ದಾರೆ ಎಂದು ದೂರಿದರು. 

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಪ್ರಸಾದ್ ಮಾತನಾಡಿ, ಸೋಮವಾರ ಮತ್ತೊಮ್ಮೆ ಕೆಲಸ ಮಾಡಿದ ಸ್ಥಳ ಅಳತೆ ಮಾಡಿಸಿ, ಪೂರ್ತಿ ಹಣ ಪಾವತಿಗೆ ಕ್ರಮ ವಹಿಸುತ್ತೇನೆ. ಈಗ ಗ್ರಾಮಕ್ಕೆ ಕೆಲಸಕ್ಕೆ ತೆರಳಿ ಎಂದು ಮನವಿ ಮಾಡಿದರು. ಪ್ರತಿಭಟನಾಕಾರರು ಒಪ್ಪಿಕೊಂಡು, ಬಳಿಕ ತಮ್ಮ ಗ್ರಾಮಕ್ಕೆ ತೆರಳಿದರು. 

ಸಂಘಟನೆಯ ಮಲ್ಲೇಶ್, ಭಾಗ್ಯಮ್ಮ, ಶೃತಿ, ಶೃಂಗಾರತೋಟ ಬಸವರಾಜ್, ಅನಿಲ್ ನಾಯ್ಕ್, ಹೊನ್ನಮ್ಮ, ಶಿವರಾಜ್, ಹನುಮಂತಪ್ಪ, ನಿಂಗಪ್ಪ,  ಮಲ್ಲೇಶ ನಾಯ್ಕ, ರಾಜು, ರೇಣುಕಮ್ಮ, ಬಸಮ್ಮ, ದುರುಗಪ್ಪ, ಬಸಪ್ಪ, ರಾಜಪ್ಪ ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳಿದ್ದರು.

error: Content is protected !!