ಜನ, ರೈತ ವಿರೋಧಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ

ಹರಪನಹಳ್ಳಿಯ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಶಾಸಕ ಪರಮೇಶ್ವರ್ ನಾಯ್ಕ್

ಹರಪನಹಳ್ಳಿ, ಜ.16 – ಜನ ವಿರೋಧಿ, ರೈತ ವಿರೋಧಿ ಬಿಜೆಪಿ ಆಡಳಿತಕ್ಕೆ ನಾಡಿನ ಜನತೆ ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ ಎಂದು ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪ ದಲ್ಲಿ ತಾಲ್ಲೂಕಿನ, ಚಿಗಟೇರಿ, ಅರಸೀಕೆರೆ, ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸ ಲಾಗಿದ್ದ ತಾಲ್ಲೂಕಿನ ನೂತನ ಗ್ರಾಮ ಪಂಚಾ ಯತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ದ  ಉದ್ಘಾಟನೆ ನೆರವೇರಿಸಿ  ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅತಿ ಹೆಚ್ಚು ಅಭ್ಯರ್ಥಿಗಳು ಜಯ ಭೇರಿ ಭಾರಿಸಿದ್ದಾರೆ. 37 ಗ್ರಾಮ ಪಂಚಾಯ ತಿಗಳ ಪೈಕಿ 22 ಗ್ರಾಮ ಪಂಚಾಯತಿಗಳು ಕಾಂಗ್ರೆಸ್ ತೆಕ್ಕೆಗೆ ಬರುವುದರಲ್ಲಿ ಯಾವುದೇ ರೀತಿ ಅನುಮಾನವಿಲ್ಲ ಎಂದು ಖಚಿತ ಪಡಿಸಿದರು.

ಜನರ ಕೈಗೆ ಸುಲಭವಾಗಿ ಸಿಗುವ ಶಾಸಕ ರಾಗಬೇಕು, ಜನಾನುರಾಗಿಯಾಗಿರಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸ ಕರು ಆಯ್ಕೆ ಆಗಲಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ನಡೆಸಲು ಬಿಜೆಪಿಯ ವರಿಗೆ ಇಷ್ಟವಿರಲಿಲ್ಲ, ತಮ್ಮ ಕಾರ್ಯಕರ್ತ ರನ್ನು ಪಂಚಾಯ್ತಿಗೆ ನಾಮ ನಿರ್ದೇಶನ ಮಾಡುವ ಯೋಜನೆ ಅವರದಾಗಿತ್ತು. ಆದರೆ ಈ ಚುನಾವಣೆ ನಡೆಯಲು ಕಾಂಗ್ರೆಸ್ ಕಾರಣ ಎಂದ ಅವರು, ನನಗೆ ರಾಜಕೀಯ ವಾಗಿ ಜನ್ಮ ನೀಡಿದ ನನ್ನ ಮಾತೃ ತಾಲ್ಲೂಕಿನ ಜನರ ಹಿಂದೆ ನಿಂತು ಅವರ ಪರವಾಗಿ ಹಾಗೂ ಗ್ರಾಮ ಪಂಚಾಯತಿ ಚುನಾವಣೆ ಗಳಲ್ಲಿ ಸೋತವರ ಹಾಗೂ ಗೆದ್ದವರ ಪರವಾಗಿ ಒಬ್ಬ ಸಾಮಾನ್ಯ ಕಾರ್ಯಕರ್ತ ನಾಗಿ ನಿಮ್ಮ ಸೇವೆ ಮಾಡುವುದಕ್ಕೆ ನಾನು ಆಭಾರಿಯಾಗಿರುತ್ತೇನೆ ಎಂದರು.

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರ ಭಟ್ ಮಾತನಾಡಿ, ಗ್ರಾಮ ಪಂಚಾಯ್ತಿಗಳು ಬಲಾಢ್ಯವಾದರೆ ದೇಶ ಸುಭದ್ರವಾಗುತ್ತದೆ, ಯೋಜನೆಗಳನ್ನು ತಿಳಿದು ಕೊಂಡು ನಿಮ್ಮ ಗ್ರಾಮಗಳಿಗೆ ಯಾವುದು ಅಗತ್ಯವಿದೆ ಎಂದು ಮನಗಂಡು ಅಭಿವೃದ್ಧಿ ಕಾರ್ಯ  ಮಾಡಿರಿ ಎಂದು ನೂತನ ಸದಸ್ಯರಿಗೆ ಸಲಹೆ ನೀಡಿದರು.

ಜಿ.ಪಂ ಸದಸ್ಯ ಎಚ್.ಬಿ. ಪರಶುರಾಮಪ್ಪ ಮಾತನಾಡಿ, ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಯಾರು ದಿಕ್ಕು ಎಂದು ಕೆಲವರು ಕೇಳುತ್ತಾರೆ, ನಮಗೆ ಪಿ.ಟಿ.ಪರಮೇಶ್ವರ ನಾಯ್ಕರೇ ದಿಕ್ಕು,  ಪಿ.ಟಿ.ಪರಮೇಶ್ವರನಾಯ್ಕ ಅವರು ಈ ತಾಲ್ಲೂಕಿನಲ್ಲಿ ಮುಂಚೂಣಿ ನಾಯಕರಾಗಿ ಪಕ್ಷ ಸಂಘಟಿಸುತ್ತಾರೆ, ಅವರ ಸಮ್ಮುಖದಲ್ಲಿ ಅಭಿನಂದನಾ ಸಮಾರಂಭ ನಡೆಯುತ್ತಿರು ವುದು ಸಂತಸ ಎಂದು ಹೇಳಿದರು.

ಲಕ್ಷ್ಮೀಪುರ ಗ್ರಾ.ಪಂ ಸದಸ್ಯ ಪಿ.ಟಿ.ಭರತ್ ಮಾತನಾಡಿ, ಈವರೆಗೂ ಒಂದು ಮನೆ ಕೊಡಲಿಕ್ಕೂ ಬಿಜೆಪಿಯವರಿಗೆ ಆಗಿಲ್ಲ, ನರೇಗಾ ಕೂಲಿ ಕಾರ್ಮಿಕರಿಗೆ ಸರಿಯಾಗಿ ಈ ಸರ್ಕಾರದಿಂದ  ಕೂಲಿ ಹಣ ಕೊಡುತ್ತಾ ಇಲ್ಲ. ತಾಲ್ಲೂಕಿನಲ್ಲಿ ಇಂದು ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಾ ಇಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ವಿ.ಬಿ.ಹಾಲಪ್ಪ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಶಶಿಧರ ಪೂಜಾರ,  ಕಂಬತ್ತಹಳ್ಳಿ ಮಂಜುನಾಥ ಮಾತನಾಡಿದರು.

ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಪಿ.ಪ್ರೇಮಕುಮಾರ, ಪುರಸಭೆ ಮಾಜಿ ಅಧ್ಯಕ್ಷ ಎಂ.ರಾಜಶೇಖರ್, ಮುಖಂಡರಾದ ಎಚ್ .ಕೆ. ಹಾಲೇಶ್‍, ಆಲದಳ್ಳಿ ಷಣ್ಮುಖಪ್ಪ, ಎಂ.ಟಿ.ಬಸವನಗೌಡ, ಪಿ.ಎಲ್. ಪೋಮ್ಯನಾಯ್ಕ, ಮತ್ತಿಹಳ್ಳಿ ಅಜ್ಜಣ್ಣ, ಪ್ರಕಾಶ ಪಾಟೀಲ, ಜಿ.ಕೆ.ಮಲ್ಲಿಕಾರ್ಜುನ, ಪುರಸಭಾ ಸದಸ್ಯರಾದ ಜಾಕೀರ್‌ ಹುಸೇನ್, ಭರತೇಶ್‍, ಲಾಟಿ ದಾದು, ಇಜಾರಿ ಮಹಾವೀರ, ಮುತ್ತಗಿ ಜಂಭಣ್ಣ, ವೇದುನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  

error: Content is protected !!