ದಾವಣಗೆರೆ, ಜ.16- ರಾಜ್ಯ ಸರ್ಕಾರದ ಮಕ್ಕಳ ನಿರ್ದೇಶನಾಲಯವು ಸಂಕಷ್ಟಕ್ಕೆ ಒಳಗಾದ ಮಕ್ಕಳು ಮತ್ತು ಅಂತಹ ಮಕ್ಕಳ ಪೋಷಕರ ನೆರವಿಗೆ ನಿಲ್ಲುವ ಸಲುವಾಗಿ ಆಪ್ತ ಸಮಾಲೋಚನೆ ಮೂಲಕ ಪರಿಹಾರ ನೀಡಲು ಉಚಿತ ಟೆಲಿ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೊಳಿಸಿದೆ.
ಯಾವುದೇ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದ ಮಕ್ಕಳು ಮತ್ತು ಅವರ ಪೋಷಕರು 14499 ಟೋಲ್‍ಫ್ರೀ ಸಂಖ್ಯೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕರೆ ಮಾಡಿ ಹೇಳಿಕೊಳ್ಳಬಹುದು. ನಿಮ್ಹಾನ್ಸ್‍ನ ವೈದ್ಯರು ದೂರವಾಣಿ
ಮೂಲಕ ಮಕ್ಕಳು ಮತ್ತು ಪೋಷಕರ ಆಪ್ತ ಸಮಾಲೋಚನೆ ನಡೆಸುವರು ಎಂದು ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್. ವಿಜಯಕುಮಾರ್ ತಿಳಿಸಿದರು.
ಯಾವುದೇ ಮಕ್ಕಳು ಪೋಕ್ಸೋ, ಬಾಲ್ಯ ವಿವಾಹ ಪ್ರಕರಣ ಹಾಗೂ ಪಾಲನೆ, ಪೋಷಣೆ, ಶಿಕ್ಷಣದ ಅವಶ್ಯಕತೆ ಇರುವ ಮತ್ತು ಇತರೆ ಯಾವುದೇ ಸಂಕಷ್ಟಕ್ಕೆ ಒಳಗಾದ ಅಥವಾ ಸಂಕಷ್ಟಕ್ಕೆ ಒಳಗಾಗಿರುವ ಇತರೆ ಮಕ್ಕಳ ಬಗ್ಗೆಯಾಗಲೀ ಯಾವುದೇ ಪರಿಹಾರ ಬೇಕಾದಲ್ಲಿ ಅಂತಹ ಮಕ್ಕಳು ಅಥವಾ ಅಂತಹ ಮಕ್ಕಳ ಪೋಷಕರಾಗಲೀ ಅಥವಾ ಯಾವುದೇ ಸಂಕಷ್ಟಕ್ಕೆ ಒಳಗಾದ ಮಕ್ಕಳ ಬಗ್ಗೆ ವಿಷಯ ತಿಳಿದಂತಹ ಇತರೆ ವ್ಯಕ್ತಿಗಳಾಗಲೀ ಟೆಲಿ ನಂಬರ್ 14499 ಮೂಲಕ ಉಚಿತ ಕರೆ ಮಾಡಿ ಪರಿಹಾರದ ಕುರಿತು ಆಪ್ತಸಮಾಲೋಚನೆ ನಡೆಸಲು ಈ ಸೌಲಭ್ಯ ತುಂಬಾ ಸಹಾಯಕಾರಿಯಾಗಿದ್ದು, ಇದರ ಉಪಯೋಗ ಪಡೆಯಬೇಕೆಂದು ಹೇಳಿದರು.
ಬಾಲಾಪರಾಧಿಯೆಂದು ಕರೆಯುವಂತಿಲ್ಲ
ಬಾಲ ನ್ಯಾಯ ಕಾಯ್ದೆ 2015ರ ಅನುಸಾರ ಕಾನೂನು ಸಂಘರ್ಷಕ್ಕೊಳಪಟ್ಟ ಮಕ್ಕಳ ಪಾಲನಾ ಸಂಸ್ಥೆಗಳನ್ನು ಸುಧಾರಣಾ ಸಂಸ್ಥೆಗಳು, ಸರ್ಟಿಫೈಡ್ ಸ್ಕೂಲ್ ಅಥವಾ ರಿಮ್ಯಾಂಡ್ ಹೋಮ್ ಎಂದು ಬಳಸದೇ ಮಕ್ಕಳ ಪಾಲನಾ ಸಂಸ್ಥೆಗಳೆಂದು ಕರೆಯತಕ್ಕದ್ದು. ಒಂದು ವೇಳೆ ಮಕ್ಕಳು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಒಳಪಟ್ಟಿದ್ದರೆ ಅಂತಹ ಮಕ್ಕಳನ್ನು ಬಾಲಾಪರಾಧಿ ಎಂದು ಕರೆಯುವಂತಿಲ್ಲ. ಅಂತಹ ಮಕ್ಕಳನ್ನು ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳೆಂದು ಕರೆಯಬೇಕು.
– ಕೆ.ಹೆಚ್. ವಿಜಯಕುಮಾರ್, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಮಕ್ಕಳ ಸಂಕಷ್ಟದ ಸ್ವರೂಪ ಅರಿತ ವೈದ್ಯರು ಅಲ್ಪಾವಧಿ ಮತ್ತು ದೀರ್ಘಾವಧಿ ಹೀಗೆ
ವಿಂಗಡಿಸಿ ಆಪ್ತ ಸಮಾಲೋಚನೆಯನ್ನು ನಡೆಸುವರು. ಸಮಸ್ಯೆ ಸ್ವರೂಪ ತೀವ್ರವಾಗಿದ್ದರೆ ನಿಮ್ಹಾನ್ಸ್ ಆಸ್ಪತ್ರೆಗೂ ಸಹ ಅವರನ್ನು ರೆಫರ್ ಮಾಡಬಹುದು ಎಂದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಾದ ಮತ್ತು ಅಶ್ಲೀಲ ಭಾವಚಿತ್ರಗಳನ್ನು ಅಥವಾ ಪೋಸ್ಟರ್ ಹಾಗೂ ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಕಟಪಡಿಸುವಂತಿಲ್ಲ. ಒಂದು ವೇಳೆ ಆ ರೀತಿ ಪ್ರಕಟಪಡಿಸಿದರೆ ಅಂತಹ ಮಾಧ್ಯಮಗಳ ವಿರುದ್ದವು ಕೂಡ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ನೀಡುವಂತಹ ಕಾನೂನನ್ನು ಈ ಕಾಯ್ದೆ ಒಳಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶೃತಿ, ಪ್ರತಿಮಾ ಸೇರಿದಂತೆ ಇತರರು ಇದ್ದರು.