ದಾವಣಗೆರೆ, ಜ.16- ದೇಶವನ್ನೇ ತಲ್ಲಣಗೊಳಿಸಿ, ಲಕ್ಷಾಂತರ ಜನರನ್ನು ಬಲಿ ಪಡೆದ ಕೊರೊನಾ ಮಹಾಮಾರಿ ಓಡಿಸಲು ಜನತೆಗೆ ಲಸಿಕೆ ನೀಡುವ ಕಾರ್ಯಕ್ಕೆ ನಗರದ ಸಿ.ಜೆ. ಆಸ್ಪತ್ರೆ ಆವರಣದಲ್ಲಿ ಶನಿ ವಾರ ಚಾಲನೆ ನೀಡಲಾಯಿತು.
ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನ ತೆಯನ್ನುದ್ದೇಶಿಸಿ ಮಾತನಾಡಿ, ಸಾಂಕೇತಿಕವಾಗಿ ಲಸಿಕಾ ಕಾರ್ಯ ಕ್ರಮಕ್ಕೆ ಚಾಲನೆ ನೀಡುತ್ತಲೇ, ನಗರದಲ್ಲೂ ಲಸಿಕೆ ವಿತರಣೆಗೆ ಚಾಲನೆ ದೊರೆಯಿತು.
ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಮಹತ್ವದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸರ್ಕಾರದ ಮಾರ್ಗಸೂಚಿಯನ್ವಯ ಆರಂಭದಲ್ಲಿ ಸಿ.ಜೆ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಡಿ.ಗ್ರೂಪ್ ನೌಕರ ರಾಜಾಭಕ್ಷಿ ಎಂಬುವವರಿಗೆ ಲಸಿಕೆ ನೀಡಲಾಯಿತು. ನಂತರ ಚಿಗಟೇರಿ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಶಶಿಧರ್ ಲಸಿಕೆ ಪಡೆದರು.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಉದ್ದೇಶಿಸಿದ್ದು, ಆರಂಭದ ದಿನ ನೂರು ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿತ್ತು. ಎಲ್ಲರ ದಾಖಲಾತಿ ಪಡೆದು ಅವರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾದ ಕೂಡಲೇ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಲು ಸೂಚಿಸಲಾಗಿತ್ತು.
376 ಜನರಿಗೆ ಲಸಿಕೆ
ಜಿಲ್ಲೆಯಲ್ಲಿ ಶನಿವಾರ 376 ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಕೋವಿಡ್ ಲಸಿಕೆ ಪಡೆದಿದ್ದಾರೆ.
ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಶನಿವಾರ 38 ಆರೋಗ್ಯ ಕಾರ್ಯಕರ್ತರು ಕೊವ್ಯಾಕ್ಸಿನ್ ಲಸಿಕೆ ಪಡೆದ್ದಾರೆ. ಜೆಜೆಎಂ ಕಾಲೇಜಿನಲ್ಲಿ 53, ಹರಿಹರ 50, ಚನ್ನಗಿರಿ 70, ಜಗಳೂರು 71, ಹೊನ್ನಾಳಿ 72 ಹಾಗೂ ಬಿಳಿಚೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 22 ಜನರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ.
ಲಸಿಕೆ ಪಡೆದವರ ಮಾತುಗಳು
ಕೊರೊನಾ ಲಸಿಕೆ ಪಡೆದಿದ್ದೇನೆ. ಆರೋಗ್ಯವಾಗಿದ್ದೇನೆ. ಏನೂ ತೊಂದರೆಯಾಗಿಲ್ಲ ಎಂದು ಚಿಗಟೇರಿ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ಶಶಿಧರ್ ಹೇಳಿದರು.
ಕೋವಿಡ್ ಲಸಿಕೆ ಪಡೆದು, ಅರ್ಧ ಗಂಟೆ ಅವಲೋಕನಾ ಕೊಠಡಿಯಲ್ಲಿದ್ದು, ಹೊರ ಬಂದು ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಲಸಿಕೆ ಪೂರ್ವದಲ್ಲಿ ಸಿಬ್ಬಂದಿ ಸಮಾಲೋಚನೆ ನಡೆಸುತ್ತಾರೆ. ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ ಪರಿಶೀಲಿಸುತ್ತಾರೆ. ನಂತರ ಲಸಿಕಾ ಕೊಠಡಿಗೆ ತೆರಳಿದಾಗ ಲಸಿಕೆ ನೀಡಲಾಗುತ್ತದೆ. ಅಲ್ಲಿ ಎರಡು ನಿಮಿಷ ಇದ್ದು, ನಂತರ ಅವಲೋಕನಾ ಕೊಠಡಿಯಲ್ಲಿ ಅರ್ಧ ಗಂಟೆ ಇರಬೇಕಾಗುತ್ತದೆ ಎಂದು ಲಸಿಕಾ ಕ್ರಿಯೆಯನ್ನು ವಿವರಿಸಿದರು.
ಯಾರೂ ಭಯ ಪಡುವ ಅಗತ್ಯವಿಲ್ಲ. ಧೈರ್ಯದಿಂದ ಲಸಿಕೆ ಪಡೆಯಬಹುದು ಎಂದರು.
ಲಸಿಕೆ ಪಡೆದ ಆರಂಭಿಕ ವ್ಯಕ್ತಿ ಜಿಲ್ಲಾಸ್ಪತ್ರೆಯ ಡಿ.ಗ್ರೂಪ್ ನೌಕರ ರಾಜಾಭಕ್ಷಿ, ಆರಂಭಿಕ ಲಸಿಕೆ ನನಗೆ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಇದೀಗ ಲಸಿಕೆ ಪಡೆದಿದ್ದು ಸಂತೋಷವಾಗಿದೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ನೀಡುವ ಕೊಠಡಿಯ ಎಡ ಭಾಗದಲ್ಲಿ ಲಸಿಕೆ ಪಡೆಯುವವರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಲಸಿಕಾ ಕೊಠಡಿಯ ಎಡ ಭಾಗದಲ್ಲಿ ಲಸಿಕೆ ಪಡೆದವರು ಅರ್ಧಗಂಟೆ ಅವಲೋಕನಾ ಕೊಠಡಿಯಲ್ಲಿರಬೇಕಾಗುತ್ತದೆ. ನಂತರ ಹೊರ ಕಳುಹಿಸಲಾಗುತ್ತದೆ. ಲಸಿಕೆ ಪಡೆಯುವ ಮುನ್ನ ಒಮ್ಮೆ ದಾಖಲಾತಿಗಳನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಂಡ ನಂತರವೇ ಲಸಿಕೆ ನೀಡಲಾಗುತ್ತದೆ.
ಲಸಿಕೆ ಪಡೆದು ಕೊರೊನಾ ಮುಕ್ತವಾಗಿಸೋಣ: ಕೊರೊನಾ ದೇಶವನ್ನು ತಲ್ಲಣಗೊಳಿಸಿತು. ಇದೀಗ ಹಂತ ಹಂತವಾಗಿ ಎಲ್ಲರೂ ಲಸಿಕೆ ಪಡೆದರೆ ಕೊರೊನಾ ಮುಕ್ತವಾಗಲು ಸಾಧ್ಯವಾಗುತ್ತದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಲಸಿಕೆ ಕಂಡು ಹಿಡಿದ ವಿಜ್ಞಾನಿಗಳು, ವೈದ್ಯರಿಗೆ ಅಭಿನಂದಿಸುವುದಾಗಿ ಹೇಳಿದ ಸಂಸದರು, ಪ್ರಧಾನಿ ನರೇಂದ್ರ ಮೋದಿಯವರು ಇಂತಹ ಕಾರ್ಯಗಳಿಂದ ಜನರಲ್ಲಿ ಶಕ್ತಿ ತುಂಬುವ ಮೂಲಕ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಶೋಭೆ ತರುವ ಕೆಲಸವಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ, ದಾವಣಗೆರೆ ತಹಶೀಲ್ದಾರ್ ಗಿರೀಶ್, ಡಿಹೆಚ್‍ಓ ಡಾ.ನಾಗರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ಇತರರು ಉಪಸ್ಥಿತರಿದ್ದರು.