ಹರಪನಹಳ್ಳಿ : ರಸ್ತೆ ಮಧ್ಯೆ ಬೋಧನೆ ಮಾಡಿದ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ

ಹರಪನಹಳ್ಳಿ,ಜ.17 – ತಾಲ್ಲೂಕಿನ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ತಮ್ಮ ಬಿಡುವಿನ ವೇಳೆಯಲ್ಲಿ ತಾಲ್ಲೂಕಿನ ರೈತರು ರಾಗಿ, ತೊಗರಿ ಹಾಗೂ ಇತರೆ ಧಾನ್ಯಗಳನ್ನು ಕಣಗಳಲ್ಲಿ ಒಕ್ಕಲು ಮಾಡದೇ ರಸ್ತೆ ಮಧ್ಯೆ ಬಂದು ಒಕ್ಕಲು ಮಾಡುತ್ತಿರುವ ಬಾಗಳಿ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರಸ್ತೆ ಮಧ್ಯೆ ಹಾಕಿರುವ ಬೆಳೆಗಳನ್ನು ತೆರವುಗೊಳಿಸಿದರು.

ತಾಲ್ಲೂಕಿನ ಬಾಗಳಿ ಗ್ರಾಮದ ಶಾಲೆಯ ಮುಂಭಾಗ ರೈತರೊಬ್ಬರು ರಾಗಿಯ ಹುಲ್ಲನ್ನು ರಸ್ತೆ ಮಧ್ಯೆ ಹಾಕಿರವುದನ್ನು ಕಂಡ ನ್ಯಾಯಾಧೀಶರು ಕೂಡಲೇ ತೆರವುಗೊಳಿಸಿ ಎಂದು ಆದೇಶಿಸಿದರು. ನಂತರ ಸಂಜೆಯ ವೇಳೆಯಲ್ಲಿ ಬಾಗಳಿ ಗ್ರಾಮದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕಂಡ ನ್ಯಾಯಾಧೀಶರು ನಿಮ್ಮ ಗ್ರಾಮಗಳ ರಸ್ತೆ ಮಧ್ಯೆ ಈ ರೀತಿ ಆಹಾರ ಧಾನ್ಯಗಳನ್ನು ಒಕ್ಕಲು ಮಾಡುವುದರಿಂದ  ವಿಷಬಾದಿತ ಆಹಾರವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ತಂದೆ ತಾಯಿಗಳಿಗೆ ಗ್ರಾಮದ ಸಾರ್ವಜನಿಕ ರೈತರಿಗೆ ಈ ರೀತಿ ರಸ್ತೆಯ ಮಧ್ಯೆ ಒಕ್ಕಲು ಮಾಡುವುದು ತಪ್ಪು ಹಾಗೂ ಕಾನೂನು ಬಾಹಿರವಾಗಿರುತ್ತದೆ ಎಂದು ತಮ್ಮ ಗ್ರಾಮದ ಸಾರ್ವಜನಿಕರಿಗೆ  ಬುದ್ಧಿ ಹೇಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹರಪನಹಳ್ಳಿ ತಾಲ್ಲೂಕಿನ ಹಿರಿಯ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪನವರು ಕಳೆದ ಎರಡು ವಾರಗಳಿಂದ ತಮ್ಮ ಬಿಡುವಿನ ವೇಳೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಂಚರಿಸಲು ಕಿರಿಕಿರಿ ಆಗುತ್ತಿರುವ ರಸ್ತೆ ಸಂಚಾರಕ್ಕೆ ನ್ಯಾಯಾಧೀಶರೇ ಸ್ವತಃ ವಾಹನವನ್ನು ಚಲಾಯಿಸಿಕೊಂಡು ರಸ್ತೆ ಮಧ್ಯೆ ಹಾಕಿರುವ ಬೆಳೆಗಳನ್ನು ತೆರವುಗೊಳಿಸಲು ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ರಸ್ತೆ ಮಧ್ಯೆ ಒಕ್ಕಲು ಮಾಡುತ್ತಿರುವ  ರೈತರೇ ಸ್ವಯಂ ಪ್ರೇರಿತರಾಗಿ ಪಕ್ಕದ ತಮ್ಮ ಜಮೀನುಗಳಿಗೆ ಹಾಕಿಕೊಂಡು ಒಕ್ಕಲು ಮಾಡಿಕೊಳ್ಳಬೇಕು ಎಂದು ರೈತರಿಗೆ ಖಡಕ್ಕಾಗಿ ಆದೇಶಿಸಿದರು.

error: Content is protected !!