ಜಗಳೂರು, ಜ.14 – ಕೋವಿಡ್ ಹಿನ್ನೆಲೆಯಲ್ಲಿ ಸಿದ್ದರಾಮೇಶ್ವರ ಜಯಂತಿ ಸಮಾರಂಭವನ್ನು ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.
ತಹಶೀಲ್ದಾರ್ ನಾಗವೇಣಿ, ತಾಲ್ಲೂಕು ಪಂಚಾಯಿತಿ ಇಒ ಮಲ್ಲಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ವೆಂಕಟೇಶ ಮೂರ್ತಿ, ಬಿಇಒ ಸಿ.ಎಸ್. ವೆಂಕಟೇಶ್ ಮತ್ತು ಭೋವಿ ಸಮಾಜದ ಮುಖಂಡರಾದ ಎಂ.ಆರ್.ಪುಟ್ಟಣ್ಣ, ಮಾಳಮ್ಮನಹಳ್ಳಿ ವೆಂಕಟೇಶ್, ವಕೀಲ ಡಿ. ಶ್ರೀನಿವಾಸ್, ಎಸ್.ಎನ್. ತಿಪ್ಪೇಸ್ವಾಮಿ ಭಾಗವಹಿಸಿದ್ದರು.
ಅಧಿಕಾರಿಗಳ ಸಾಮೂಹಿಕ ಗೈರು : 12ನೇ ಶತಮಾನದ ಕಾಯಕ ಯೋಗಿ ಶರಣ ಸಿದ್ದರಾಮೇಶ್ವರ ಜಯಂತಿ ಸಮಾರಂಭಕ್ಕೆ ಬೆರಳೆಣಿಕೆ ಅಧಿಕಾರಿಗಳನ್ನು ಹೊರತುಪಡಿಸಿ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರು.
ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿರುವ ಸಿದ್ದರಾಮೇಶ್ವರ ಜಯಂತಿ ಸಮಾರಂಭಕ್ಕೆ ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ, ಗ್ರಾಮೀಣ ನೀರು ಸರಬರಾಜು ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಬೆಸ್ಕಾಂ, ಪಶು ಸಂಗೋಪನಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಬಹುತೇಕ ಇಲಾಖೆ ಅಧಿಕಾರಿಗಳು ಹಾಜರಾಗದೆ ಬೇಜವಾಬ್ಧಾರಿಯಿಂದ ವರ್ತಿಸಿದ್ದು, ಕರ್ತವ್ಯ ಲೋಪ ಎಸಗಿದ್ದಾರೆ. ಗೈರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಭೋವಿ ಸಮಾಜದ ಮುಖಂಡರು ತಹಶೀಲ್ದಾರ್ ನಾಗವೇಣಿ ಹಾಗೂ ಇಒ ಮಲ್ಲಾನಾಯ್ಕ ಅವರನ್ನು ಒತ್ತಾಯಿಸಿದರು.
ಎಲ್ಲಾ ಅಧಿಕಾರಿಗಳಿಗೆ ಜಯಂತಿ ಸಮಾರಂಭಕ್ಕೆ ಹಾಜರಾಗುವಂತೆ ಪೂರ್ವಭಾವಿ ಸಭೆಯಲ್ಲೇ ಸೂಚಿಸಲಾಗಿತ್ತು. ಆದರೂ ಗೈರಾಗಿದ್ದಾರೆ ಎಂದು ತಹಶೀಲ್ದಾರ್ ನಾಗವೇಣಿ ಅವರು ಸಮಜಾಯಿಷಿ ನೀಡಿದರು.