ದಾವಣಗೆರೆ,ಜ.12- ನಿಗದಿತ ಸ್ಥಳ ದಲ್ಲಿ ಕಸ ವಿವೇವಾರಿ ಮಾಡದೇ ಎಲ್ಲೆಂದ ರಲ್ಲೇ ಕಸ ಹಾಕಿದ ಆರೋಪದಲ್ಲಿ ವಾಣಿಜ್ಯ ಅಂಗಡಿಗಳ ಮೇಲೆ ದಾಳಿ ಮಾಡಿರುವ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಂಡ ವಿಧಿಸುವು ದರ ಮೂಲಕ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್ ಅವರು ನಗರದ ವಿವಿಧ ಭಾಗಗಳಲ್ಲಿ ನಿನ್ನೆ ಸಂಚರಿಸಿದ ಸಂದರ್ಭದಲ್ಲಿ ಕಂಡು ಬಂದ ಕಸದ ರಾಶಿ ಬಗ್ಗೆ ತರಾಟೆಗೆ ತೆಗೆದುಕೊಂಡು ಆದೇಶಿಸಿದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಈ ಕ್ರಮ ಜರುಗಿಸಿದೆ. ವಿವಿಧ ಬಡಾವಣೆಗಳಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬಂದ ಕಸದ ರಾಶಿಯಲ್ಲಿ ದೊರೆತ ಚೀಟಿ, ಬಿಲ್ಲುಗಳು, ಹಾಳೆ, ಬ್ಯಾಗುಗಳಲ್ಲಿ ಕಂಡು ಬಂದ ಹೆಸರು ಗಳಿರುವ ಅಂಗಡಿಗಳನ್ನು ಪತ್ತೆ ಮಾಡಿಕೊಂಡು ಹೋಗಿ ದಾಳಿ ಮಾಡಿದ ಪಾಲಿಕೆ ಸಿಬ್ಬಂದಿಗಳು, ಅವುಗಳನ್ನು ತೋರಿಸಿ ಈ ಆಧಾರದ ಮೇಲೆ ದಂಡ ಹಾಕಿದ್ದಾರೆ.
ಶಾಮನೂರು ರಸ್ತೆ, ಬಿಐಇಟಿ ರಸ್ತೆ, ಬಾಯ್ಸ್ ಹಾಸ್ಟೆಲ್ ರಸ್ತೆಗಳಲ್ಲಿನ ವಾಣಿಜ್ಯ ಅಂಗಡಿಗಳು ಕಸವನ್ನು ಕಸ ಸಂಗ್ರಹಣಾ ವಾಹನಗಳಿಗೆ ಹಾಕದೇ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗಿದೆ ಎಂದು ಆರೋಪಿಸಿ ದಂಡ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಮತ್ತು ಇಂದು ಈ ಕ್ರಮ ಕೈಗೊಳ್ಳಲಾಗಿದ್ದು, 8-10 ಅಂಗಡಿಗಳಿಗೆ ಹಾಕಿದ್ದ ದಂಡದಲ್ಲಿ 10,300 ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು `ಜನತಾವಾಣಿ’ಗೆ ವಿವರಿಸಿದ್ದಾರೆ. ಉಳಿದ ಭಾಗಗಳಲ್ಲೂ ಇದೇ ರೀತಿ ದಾಳಿ ಮಾಡುವುದಾಗಿ ಅವರು ವಿವರಿಸಿದ್ದಾರೆ.
ಪರಿಸರ ಅಭಿಯಂತರ ಬಸವರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್, ಆರೋಗ್ಯ ನಿರೀಕ್ಷಕರುಗಳಾದ ಹರೀಶ್, ಮಹಾಂತೇಶ್, ಲಕ್ಷ್ಮಿ, ರಾಜಪ್ಪ, ಶ್ರೀಧರ ನಾಯ್ಕ ಮತ್ತಿತರರು ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.