ದಾವಣಗೆರೆ, ಜ.12- ವಸ್ತು ಪ್ರದರ್ಶನವನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಶ್ರಮಿಕ ವರ್ಗದ ಬದುಕು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇವರ ಜೊತೆಗೆ ಮಾಲೀಕರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕರ್ನಾಟಕ ಸ್ಟೇಟ್ ಎಕ್ಸಿಬಿಷನ್ ಆರ್ಗನೈಜರ್ ಅಂಡ್ ಅಮ್ಯೂಸ್ಮೆಂಟ್ಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ. ಭದ್ರಪ್ಪ ತಿಳಿಸಿದ್ದಾರೆ.
ವಸ್ತು ಪ್ರದರ್ಶನದಲ್ಲಿ ಮನರಂಜನೆ ನೀಡಿ ಸಂತಸವನ್ನುಂಟು ಮಾಡುವ ಈ ವಲಯದ ಅಸಂಘಟಿತ ಕಾರ್ಮಿಕ ಕುಟುಂಬಗಳು ನೋವನ್ನು ಅನುಭವಿಸುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ಸ್ತಬ್ಧವಾಗಿ ಇದೀಗ ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿವೆ. ಜೀವನೋಪಾಯಕ್ಕಾಗಿ ಕೆಲವರು ಬೇರೆಡೆ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು, ಮತ್ತೆ ಕೆಲವರು ಕೂಲಿ ಕೆಲಸ ಸಿಗದೇ ಭಿಕ್ಷೆ ಬೇಡಲು ಮುಂದಾಗಿದ್ದಾರೆ ಎಂದು ವಸ್ತುಪ್ರದರ್ಶನ ಆಯೋ ಜನೆಯ ಸ್ಥಳದಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವರ್ಗದ ನೋವನ್ನು ವ್ಯಕ್ತಪಡಿಸಿದರು.
ಈ ವಸ್ತು ಪ್ರದರ್ಶನದ ಮೇಲೆ ಅವಲಂಬಿತ ರಾದವರ ಕಡೆ ಗಮನ ಹರಿಸಲಿಲ್ಲ. ಇದುವರೆಗೂ ನಾವುಗಳು ನಮ್ಮಗಳ ಸಂಕಷ್ಟಕ್ಕೆ ಸರ್ಕಾರ ಬಳಿ ಮನವಿ ಮಾಡಿರಲಿಲ್ಲ. ಹೀಗಾಗಿ ಕೊರೊನಾ ಸಂದರ್ಭದಲ್ಲಿ ಸರ್ಕಾರವೂ ನಮ್ಮನ್ನು ಪರಿಗಣಿಸಿಲ್ಲ. ಕೊರೊನಾದಿಂದ ಬಂದ ಸಂಕಷ್ಟದಿಂದ ಪಾರಾಗುವ ನಿಟ್ಟಿನಲ್ಲಿ ಈಗ ನೂತನವಾಗಿ ಈ ಸಂಘವನ್ನು ಆಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.
ಹಿಂದೆ ಪ್ರದರ್ಶನಕ್ಕೆ ಅಗ್ನಿಶಾಮಕ ದಳದಿಂದ ಅನುಮತಿ ಪಡೆದು ದಿನಕ್ಕೆ 10 ಸಾವಿರ ಶುಲ್ಕ ಭರಿಸಲಾಗುತ್ತಿತ್ತು. ಈಗ 50 ಸಾವಿರಕ್ಕೆ ಶುಲ್ಕ ಏರಿಕೆ ಮಾಡಲಾಗಿದ್ದು, ಇದು ಪ್ರದರ್ಶನಕಾರರಿಗೆ ತುಂಬಲಾರದ ಹೊರೆಯಾಗಿದೆ. ಇದು ಕಡಿಮೆ ಮಾಡಬೇಕು. ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳ ಜಾತ್ರಾ ಮಹೋತ್ಸವದಲ್ಲಿ ಇಲಾಖೆಯಿಂದ ಪರವಾನಿಗೆ ಪಡೆದ ಪ್ರದರ್ಶನಕಾರರಿಗೆ ಮಾತ್ರ ವಸ್ತು ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಪರಿಗಣಿಸಬೇಕು. ಬೇರೆಯವರಿಗೆ ಅವಕಾಶ ಕಲ್ಪಿಸಬಾರದು. ಒಂದು ಕಡೆ ಪ್ರದರ್ಶನಕ್ಕೆ ಅನುಮತಿ ದೊರಕಬೇಕಾದರೆ ಹತ್ತಾರು ಇಲಾಖೆಗಳಿಗೆ ಅಲೆದಾಡುವಂತಾಗಿದ್ದು, ಪ್ರದರ್ಶನದ ಪರವಾನಿಗೆಯನ್ನು ಸಿಂಗಲ್ ವಿಂಡೋ ಅಡಿ ಅವಕಾಶ ನೀಡಬೇಕು. ಈ ಬೇಡಿಕೆಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳಿಗೆ ಶೀಘ್ರವೇ ಮನವಿ ಸಲ್ಲಿಸಲಾಗುವುದು ಎಂದರು.
ಫೆ.5ರಿಂದ ನಗರದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗುತ್ತಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ವಸ್ತು ಪ್ರದರ್ಶನ ವೀಕ್ಷಣೆಗೆ ಜನರು ಸಹ ಬರುವುದು ಕಡಿಮೆಯಾಗಿದ್ದು, ವಸ್ತುಪ್ರದ ರ್ಶನ ಆಯೋಜಿಸಿದರೆ ಜನರು ಬರುತ್ತಾರೆಯೇ ಎಂಬ ಆತಂಕವುಂಟಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪಾಟೀಲ್, ಉಪಾಧ್ಯಕ್ಷ ಸಿ.ಕೆ. ದಿನೇಶ್ ಕುಮಾರ್, ಜಂಟಿ ಕಾರ್ಯದರ್ಶಿ ಶಬ್ಬೀರ್ ಖಾನ್, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸಯ್ಯ, ವಕ್ತಾರ ಚೈತನ್ಯ ಕುಮಾರ್ ಅಯ್ಯಂಗಾರ್, ಸಮಿತಿಯ ಎಸ್. ಕುಮಾರ್, ಅಚ್ಚು, ವೀರಣ್ಣ ಸುರ್ವೇ, ಮಹಮದ್ ಕಬೀರ್ ಸೇರಿದಂತೆ ಇತರರು ಇದ್ದರು.